ಕೇರಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ 'ಕಮಲ' ಅರಳಿದ್ದು ಯಾವಾಗ..? ವಿಜೇತರು ಯಾರು..? ಇಲ್ಲಿದೆ ಮಾಹಿತಿ! | Kerala Election

Kerala Election | ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೇರಳ ಬಿಜೆಪಿ ನಾಯಕರು
Kerala Election | ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೇರಳ ಬಿಜೆಪಿ ನಾಯಕರು
Published on
ತಿರುವನಂತಪುರಂ: ದೇವರ ನಾಡೆಂದು ಕರೆಸಿಕೊಳ್ಳುವ ಕೇರಳದಲ್ಲಿ ವಿಧಾನಸಭಾ ಚುನಾವಣೆಯ (Kerala Election) ಕಾವು ಜೋರಾಗಿದ್ದು, ಏಪ್ರಿಲ್ 9 ರಂದು ರಾಜ್ಯದ ಎಲ್ಲಾ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದ್ದು, ಆಡಳಿತಾರೂಢ ಎಡ ಎಲ್​ಡಿಎಫ್​, ವಿಪಕ್ಷವಾದ ಯುಡಿಎಫ್​ ಮತ್ತು ಬಿಜೆಪಿ ನಡುವೆ ಈ ಬಾರಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.

ಬಿಜೆಪಿ ಮೊದಲ ಗೆಲುವು

ಕೇರಳದಲ್ಲಿ ಬಿಜೆಪಿಯ ಪಯಣವನ್ನು ಗಮನಿಸುವುದಾದರೆ 2016ರಲ್ಲಿ ಮೊದಲ ಬಾರಿಗೆ ನೇಮಮ್ ಕ್ಷೇತ್ರದಿಂದ ಓ. ರಾಜಗೋಪಾಲ್ ಜಯಗಳಿಸುವ ಮೂಲಕ ಪಕ್ಷವು ಖಾತೆ ತೆರೆದಿತ್ತು. ಆದರೆ, 2021ರ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ, ಪಕ್ಷದ ಮತ ಹಂಚಿಕೆಯು ಶೇ. 10.5 ರಿಂದ ಶೇ. 11.3ಕ್ಕೆ ಏರಿಕೆಯಾಗಿರುವುದು ಗಮನಾರ್ಹ.
ಕೇರಳದಲ್ಲಿ ಸಾಂಪ್ರದಾಯಿಕವಾಗಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಪೈಪೋಟಿ ಇದ್ದರೂ ಕೂಡ, ಪ್ರತಿ ಸಲ ಬಿಜೆಪಿ ತನ್ನ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳುತ್ತಲೇ ಸಾಗಿದೆ ಈ ಬಾರಿಯೂ ಅಬ್ಬರದ ಪ್ರಚಾರ ನಡೆಸುತ್ತಿರುವ ಕೇಸರಿ ನಾಯಕರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ದೇವರ ನಾಡಿಗೆ ಕಾಲಿಡುತ್ತಿದ್ದಾರೆ. ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಕಮಲ ಪಾಳಯ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಒಟ್ಟು 2.71 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಇದರಲ್ಲಿ 1.38 ಕೋಟಿ ಮಹಿಳಾ ಮತದಾರರು ಹಾಗೂ 1.31 ಕೋಟಿ ಪುರುಷ ಮತದಾರರು ಸೇರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿರುವುದು ಈ ಚುನಾವಣೆಯ ವಿಶೇಷತೆಯಾಗಿದ್ದು, 277 ತೃತೀಯ ಲಿಂಗಿ ಮತದಾರರು ಕೂಡ ಮತ ಚಲಾಯಿಸಲಿದ್ದಾರೆ.
ಸುಗಮ ಮತದಾನಕ್ಕಾಗಿ ರಾಜ್ಯಾದ್ಯಂತ 25,231 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಕಳೆದೊಂದು ದಶಕದಿಂದ ಆಡಳಿತ ನಡೆಸುತ್ತಿರುವ ಎಲ್‌ಡಿಎಫ್‌ಗೆ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ಅಲ್ಪ ಹಿನ್ನಡೆ ತಂದಿದ್ದು, ಅಧಿಕಾರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಮತ್ತೊಂದೆಡೆ ಯುಡಿಎಫ್ ಈ ಬಾರಿ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದರೆ, ಬಿಜೆಪಿ ತನ್ನ ನೆಲೆ ವಿಸ್ತರಿಸಲು ತೀವ್ರ ಪ್ರಯತ್ನ ನಡೆಸುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net