ಸತತ 4,399 ದಿನಗಳ ಪ್ರಧಾನಿ ಪಟ್ಟ; ಅಧಿಕಾರಾವಧಿಯ ದಾಖಲೆಯ ನಡುವೆ ಮೋದಿ ಹೇಳಿದ ಆ ಒಂದು 'ಗುಟ್ಟು' ಇಲ್ಲಿದೆ ನೋಡಿ! | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬುಧವಾರದಂದು ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಿದ್ದು, ಭಾರತದ ಸಂವಿಧಾನ ಜಾರಿಗೆ ಬಂದ ನಂತರ ದೇಶದ ಅತಿ ಸುದೀರ್ಘ ಅವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ತಮ್ಮ ರಾಜಕೀಯ ಪಯಣವನ್ನು ಸ್ಮರಿಸಿರುವ ಅವರು, ಸಾರ್ವಜನಿಕ ಸೇವೆ, ನಮ್ರತೆ ಹಾಗೂ ಕರ್ತವ್ಯ ಪ್ರಜ್ಞೆಯೇ ಉತ್ತಮ ಆಡಳಿತದ ಭದ್ರ ಬುನಾದಿ ಎಂದಿದ್ದಾರೆ.

ನೆಹರು ದಾಖಲೆ ಮುರಿದ ಮೋದಿ

2014 ರ ಮೇ 26ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ, ಸತತವಾಗಿ 4,399 ದಿನಗಳ ಕಾಲ ಆಡಳಿತ ನಡೆಸಿ ಈ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 1952 ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನೆಹರು ಸತತ 4,398 ದಿನಗಳ ಕಾಲ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಈಗ ಆ ದಾಖಲೆ ಇತಿಹಾಸದ ಪುಟ ಸೇರಿದೆ.

ಜನರ ವಿಶ್ವಾಸಕ್ಕೆ ನಿಸ್ವಾರ್ಥ ಸೇವೆಯೇ ಮೂಲಮಂತ್ರ

ಈ ಮೈಲಿಗಲ್ಲಿನ ಕುರಿತಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಪ್ರಧಾನಿ ಮೋದಿ, ಸಾರ್ವಜನಿಕರ ವಿಶ್ವಾಸವನ್ನು ಕೇವಲ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಭಾವದಿಂದ ಮಾತ್ರ ಗಳಿಸಲು ಸಾಧ್ಯ. ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಅತಿ ದೊಡ್ಡ ಅಳತೆಗೋಲಾಗಿದೆ. ಯಾರು ನಮ್ರತೆ, ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ದಣಿವರಿಯದೆ ಕೆಲಸ ಮಾಡುತ್ತಾರೋ, ಅವರು ಮಾತ್ರ ಜನರ ನಂಬಿಕೆಯನ್ನು ಗಳಿಸಲು ಸಾಧ್ಯ ಎಂದು ಬರೆದುಕೊಂಡಿದ್ದಾರೆ.
ನಾಯಕತ್ವದ ಕುರಿತಾದ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿರುವ ಅವರು, ಆಡಳಿತಗಾರರು ಯಾವಾಗಲೂ ಪ್ರಜೆಗಳ ಕಲ್ಯಾಣಕ್ಕೆ ಬದ್ಧರಾಗಿರಬೇಕು ಮತ್ತು ನಮ್ರತೆಯಿಂದ ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಯಾರು ಸ್ವಾಭಾವಿಕವಾಗಿಯೇ ಸಮರ್ಪಣಾ ಭಾವವನ್ನು ಹೊಂದಿರುತ್ತಾರೋ ಮತ್ತು ಸದಾ ಪ್ರಜೆಗಳ ಹಿತಚಿಂತನೆಯಲ್ಲೇ ತೊಡಗಿರುತ್ತಾರೋ, ಅಂತಹ ವಿನಮ್ರ ಆತ್ಮವನ್ನು ಹೊಂದಿರುವ ರಾಜನು ನಿಜವಾಗಿಯೂ ಅತ್ಯುನ್ನತ ಕೀರ್ತಿಯನ್ನು ಪಡೆಯುತ್ತಾನೆ ಎಂದು ಅವರು ತಿಳಿಸಿದ್ದಾರೆ.

ಎನ್‌ಡಿಎ ನಾಯಕರಿಂದ ಅಭಿನಂದನೆಗಳ ಸುರಿಮಳೆ

ಪ್ರಧಾನಿ ಮೋದಿ ಅವರ ಈ ಅಭೂತಪೂರ್ವ ಸಾಧನೆಗೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಪ್ರಧಾನಿ ಮೋದಿಯವರ 12 ವರ್ಷಗಳ ಆಡಳಿತವು ಭಾರತದ ಹೆಮ್ಮೆಯನ್ನು ಮರುಸ್ಥಾಪಿಸುವ, ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವ ಮತ್ತು ದೇಶವನ್ನು ದಾಸ್ಯದ ಮನಸ್ಥಿತಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಾಗಿದೆ ಎಂದು ಶ್ಲಾಘಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹ ಪೋಸ್ಟ್​​ ಹಂಚಿಕೊಂಡಿದ್ದು, ಅದರಲ್ಲಿ, ಪ್ರಧಾನಿ ಮೋದಿ ಅವರು ಜನರಿಗೆ ಕೇವಲ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಮಾತ್ರ ನೀಡಿಲ್ಲ, ಬದಲಿಗೆ ಒಂದು ಸ್ಪಷ್ಟ ಗುರಿ, ವಿಶಾಲವಾದ ದೂರದೃಷ್ಟಿ ಮತ್ತು ಆತ್ಮವಿಶ್ವಾಸದಿಂದ ತುಂಬಿದ ರಾಷ್ಟ್ರೀಯ ಸಂಕಲ್ಪವನ್ನು ನೀಡಿದ್ದಾರೆ. ಈ ಸಂದರ್ಭವು ಕೇವಲ ಸಾಧನೆಗಳನ್ನು ಎಣಿಸುವುದಲ್ಲ, ಬದಲಿಗೆ ಭಾರತದ ಸಾಮರ್ಥ್ಯದ ಮೇಲೆ ನಾಗರಿಕರಲ್ಲಿ ನಂಬಿಕೆಯನ್ನು ಬಲಪಡಿಸಿದ ಸಮಗ್ರ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವುದಾಗಿದೆ ಎಂದು ಬಣ್ಣಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿಯವರನ್ನು ರಾಷ್ಟ್ರವೇ ಮೊದಲು ಎಂಬ ತತ್ವದಿಂದ ಮುನ್ನಡೆಯುವ ದಣಿವರಿಯದ ಕರ್ಮಯೋಗಿ ಎಂದು ಕೊಂಡಾಡಿದ್ದಾರೆ. ಅವರ ಆಡಳಿತದ ವರ್ಷಗಳು ಭಾರತದ ಪ್ರಗತಿಗೆ ಅಚಲವಾದ ಸಮರ್ಪಣೆ, ಜನರ ಕಲ್ಯಾಣಕ್ಕೆ ದೃಢವಾದ ಬದ್ಧತೆ ಮತ್ತು ದೇಶದ ಸೇವೆಯಲ್ಲಿ ಪರಿವರ್ತನಾತ್ಮಕ ನಾಯಕತ್ವಕ್ಕೆ ಸಾಕ್ಷಿಯಾಗಿವೆ ಎಂದು ಪ್ರಶಂಸಿಸಿದ್ದಾರೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net