ನಾವು ಕೇವಲ ಎರಡು ಚರಣ ಮಾತ್ರ ಹಾಡುತ್ತೇವೆ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರ; 'ನೂತನ ಮುಸ್ಲಿಂ ಲೀಗ್​' ಎಂದ ಕೇಸರಿ ಪಾಳಯ! Vande Mataram Controversy

ರಾಷ್ಟ್ರೀಯ ಗೀತೆ ವಂದೇ ಮಾತರಂ ವಿವಾದ
ರಾಷ್ಟ್ರೀಯ ಗೀತೆ ವಂದೇ ಮಾತರಂ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಗೀತೆ ವಂದೇ ಮಾತರಂ ವಿವಾದ
  • ಮೊದಲ ಎರಡು ಚರಣ ಮಾತ್ರ ಹಾಡುವುದಾಗಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ನಿರ್ಧಾರ
  • ಕಾಂಗ್ರೆಸ್​ ನೂತನ ಮುಸ್ಲಿಂ ಲೀಗ್​ ಎಂದ ಬಿಜೆಪಿ
ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಗೀತೆ 'ವಂದೇ ಮಾತರಂ' (Vande Mataram Controversy) ರಾಜಕೀಯ ಜಂಗುಳಿಗೆ ಕಾರಣವಾಗಿದೆ. ಅಧಿಕೃತ ಕಾರ್ಯಕ್ರಮಗಳಲ್ಲಿ ಸಂಪೂರ್ಣ ವಂದೇ ಮಾತರಂ ಹಾಡಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ನಿಯಮ ತಂದಿದ್ದರೂ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಮಾತ್ರ ಗೀತೆಯ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತವಾಗಿರಲು ನಿರ್ಧರಿಸಿದೆ. ಈ ತೀರ್ಪು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ಸಭೆಗಳಲ್ಲಿ 1937ರ ನಿರ್ಣಯದಂತೆ ಕೇವಲ ಮೊದಲ ಎರಡು ಚರಣಗಳನ್ನಷ್ಟೇ ಹಾಡಲಾಗುವುದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಟ್ಯಾಗೋರ್ ಮತ್ತು ಸುಭಾಸ್ ಚಂದ್ರ ಬೋಸ್ ಅವರಂತಹ ದಿಗ್ಗಜರ ಸಮ್ಮುಖದಲ್ಲೇ ಈ ನಿಯಮ ರೂಪುಗೊಂಡಿದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯಿಂದ 'ಹೊಸ ಮುಸ್ಲಿಂ ಲೀಗ್' ಟ್ಯಾಗ್!


ಕಾಂಗ್ರೆಸ್‌ನ ಈ ನಡೆಗೆ ಬಿಜೆಪಿ ಮುಖಂಡರು ಮುಗಿಬಿದ್ದಿದ್ದಾರೆ. ಇದು ರಾಷ್ಟ್ರೀಯ ಗೀತೆಗೆ ಮಾಡಿದ ಅಪಮಾನ ಎಂದು ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ಕಾಂಗ್ರೆಸ್ ಪಕ್ಷ ಈಗ "ಹೊಸ ಮುಸ್ಲಿಂ ಲೀಗ್" ರೀತಿಯಲ್ಲಿ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಏಕೈಕ ಹಕ್ಕುಸ್ವಾಮ್ಯ ಹೊಂದಿದ್ದೇವೆ ಎನ್ನುವ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ ಎಂದಿದ್ದಾರೆ.

ಡೈವರ್ಷನ್ ಪಾಲಿಟಿಕ್ಸ್ ಎಂದ ಕಾಂಗ್ರೆಸ್


ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್, ಇದು ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಡೈವರ್ಷನ್ ತಂತ್ರ ಎಂದು ತಿರುಗೇಟು ನೀಡಿದೆ. ಪೇಪರ್ ಸೋರಿಕೆ ಮತ್ತು ಪ್ರಮುಖ ರಾಷ್ಟ್ರೀಯ ಸಮಸ್ಯೆಗಳನ್ನು ಮುಚ್ಚಿಹಾಕಲು ಬಿಜೆಪಿ ಈ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net