ತಾಲಿಬಾನಲ್ಲಿ ನಿಲ್ಲದ ಕ್ರೌರ್ಯ: ಹೆಂಡತಿ-ಮಕ್ಕಳನ್ನು ಹೊಡೆಯಲು ಗಂಡಂದಿರಿಗೆ ಅಧಿಕೃತ ಪರವಾನಗಿ! ಈ ವಿಚಿತ್ರ ಕಾನೂನು ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ | Taliban

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ತಾಲಿಬಾನಿನಲ್ಲಿ ನಿಲ್ಲದ ಮಹಿಳೆಯರ ಮೇಲಿನ ಕ್ರೌರ್ಯ
  • ಹೆಂಡತಿ ಮಕ್ಕಳಿಗೆ ಹೊಡೆಯಲು ಗಂಡಂದಿರಿಗೆ ಪರವಾನಗಿ ನೀಡಿದ ತಾಲಿಬಾನ್​ ಸರ್ಕಾರ
  • ಮೂಳೆ ಮುರಿಯದ ರೀತಿ ಹೊಡೆಯಲು ಅವಕಾಶ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಆಡಳಿತ ದಿನದಿಂದ ದಿನಕ್ಕೆ ಕ್ರೂರವಾಗುತ್ತಿದ್ದು, ಈಗಾಗಲೇ ಮಹಿಳೆಯರ ಶಿಕ್ಷಣ ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕಿರುವ ತಾಲಿಬಾನ್, ಈಗ ಹೆಂಡತಿಯರ ಮೇಲೆ ದೈಹಿಕ ದೌರ್ಜನ್ಯ ಎಸಗಲು ಗಂಡಂದಿರಿಗೆ ಕಾನೂನುಬದ್ಧ ಪರವಾನಗಿ ನೀಡುವ ಮೂಲಕ ಅಮಾನವೀಯತೆಯ ಪರಾಕಾಷ್ಠೆ ಮೆರೆದಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾಡಾ ಸಹಿ ಮಾಡಿರುವ ಹೊಸ 90 ಪುಟಗಳ ದಂಡ ಸಂಹಿತೆಯು ತಾಲಿಬಾನಿನಲ್ಲಿರುವ ಇಡೀ ಸ್ತ್ರೀ ಸಮಾಜವನ್ನೇ ನಿದ್ದೆಗೆಡಿಸಿದೆ ಎಂದರೆ ತಪ್ಪಾಗದು.

ಮೂಳೆ ಮುರಿಯದಂತೆ ಹೊಡೆಯಿರಿ!

ತಾಲಿಬಾನ್‌ನ ಈ ವಿಚಿತ್ರ ಸಂಹಿತೆಯ ಪ್ರಕಾರ, ಗಂಡ ತನ್ನ ಹೆಂಡತಿ ಅಥವಾ ಮಕ್ಕಳನ್ನು ಎಷ್ಟು ಬೇಕಾದರೂ ಹೊಡೆಯಲು ಅವಕಾಶವನ್ನು ನೀಡಲಾಗಿದ್ದು, ಆದರೆ ಹೊಡೆತದಿಂದ ಮೂಳೆ ಮುರಿಯುವ ಅಥವಾ ರಕ್ತ ಸುರಿಯುವಂತಹ ಗಾಯಗಳಾಗಬಾರದು ಎಂಬ ಷರತ್ತನ್ನು ನಿಗದಿ ಪಡಿಸಲಾಗಿದೆ.
ಈ ನಿಯಮದ ಪ್ರಕಾರ ಗಂಭೀರ ಗಾಯವಾಗದ ಹಾಗೇ ಹೆಂಡತಿ ಮತ್ತು ಮಕ್ಕಳನ್ನು ಎಷ್ಟು ಬೇಕಾದರು ತಳಿಸಲು ಸರ್ಕಾರವೇ ಒಂದು ರೀತಿಯ ಪರವಾನಗಿಯನ್ನು ನೀಡಿದಂತಾಗಿದೆ. ಒಂದು ವೇಳೆ ಪತಿ ಗಂಭೀರವಾಗಿ ಹಲ್ಲೆ ನಡೆಸಿ ಗಾಯಗಳಾದರೆ, ಆತನಿಗೆ ಕೇವಲ 15 ದಿನಗಳ ಜೈಲು ಶಿಕ್ಷೆಯನ್ನು ನೀಡುವುದಾಗಿ ತಿಳಿಸಲಾಗಿದೆ.

ಮಹಿಳೆಯರಿಗೆ ನ್ಯಾಯಾಲಯವೇ ಜೈಲು!

ಅಫ್ಘಾನಿಸ್ತಾನದಲ್ಲಿರುವ ಮಹಿಳೆಯರ ಪಾಡು ನಾಯಿಗಿಂತ ಕಡೆಯಾಗಿದೆ ಎಂದರೆ ಸುಳ್ಳಾಗದು. ಇದಕ್ಕೆ ನಿದರ್ಶನವೆಂಬಂತೆ ಒಬ್ಬ ಮಹಿಳೆ ತನ್ನ ಮೇಲೆ ನಡೆದ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಲು ಕೋರ್ಟ್​ಗೆ ಹೋದರು ಅಲ್ಲಿಯೂ ಮತ್ತಷ್ಟು ಹಿಂಸೆಯ ಹೊರತಾಗಿ ಬೇರೆನು ಸಿಗದಂತಾಗಿದೆ.
ತನ್ನ ಮೇಲೆ ಹಲ್ಲೆಯಾಗಿದೆ ಎಂದು ಸಾಬೀತುಪಡಿಸಲು ಮಹಿಳೆ ನ್ಯಾಯಾಧೀಶರ ಮುಂದೆ ತನ್ನ ಗಾಯಗಳನ್ನು ತೋರಿಸಬೇಕಂತೆ, ಆದರೆ, ಅಲ್ಲಿಯೂ ಆಕೆ ಸಂಪೂರ್ಣವಾಗಿ ಬಟ್ಟೆಯನ್ನು ಮುಚ್ಚಿಕೊಂಡಿರಬೇಕು ಎಂಬ ಕಾನೂನನ್ನೂ ಪಾಲಿಸಬೇಕೆಂತೆ.
ಇದರೊಟ್ಟಿಗೆ, ಮಹಿಳೆ ನ್ಯಾಯಾಲಯಕ್ಕೆ ಬರುವ ಮುನ್ನ ಆಕೆಯೊಟ್ಟಿಗೆ ಗಂಡ ಅಥವಾ ಪುರುಷ ರಕ್ಷಕ ಇರಲೇಬೇಕಂತೆ, ಅಂದರೆ ಯಾರ ವಿರುದ್ಧ ದೂರು ನೀಡಬೇಕೋ, ಆತನನ್ನೇ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಅಲ್ಲಿನ ಮಹಿಳೆಯರದ್ದಾಗಿದೆ.

ಸಂಬಂಧಿಕರ ಮನೆಗೆ ಹೋದರೆ 3 ತಿಂಗಳು ಜೈಲು

ತಾಲಿಬಾನ್​ ಸರ್ಕಾರದಲ್ಲಿ ಮಹಿಳೆಯರ ಓಡಾಟದ ಮೇಲೆ ಸಹ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದ್ದು, ವಿವಾಹಿತ ಮಹಿಳೆಯೊಬ್ಬರು ಗಂಡನ ಅನುಮತಿ ಪಡೆಯದೆ ಸಂಬಂಧಿಕರನ್ನು ಭೇಟಿ ಮಾಡಲು ಹೋದರೆ, ಆಕೆಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
2021ರ ನಂತರ ಕಸಿದುಕೊಂಡ ಹಕ್ಕುಗಳು
ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಹಿಳೆಯರ ಬದುಕು ದುಸ್ತರವಾಗಿದ್ದು, ಅಲ್ಲಿನ ಹೆಣ್ಣು ಮಕ್ಕಳಿಗೆ ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಏಕೈಕ ದೇಶವಾಗಿ ಅಫ್ಘಾನಿಸ್ತಾನ ರೂಪುಗೊಂಡಿದೆ.
ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಾದ ಉದ್ಯಾನವ, ಜಿಮ್‌ ಮತ್ತು ಸಲೂನ್‌ಗಳಿಗೆ ಸಹ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇವರ ಕ್ರೌರ್ಯ ಇಷ್ಟಕ್ಕೆ ನಿಲ್ಲದೆ ಸರ್ಕಾರಿ ಕಚೇರಿಗಳು ಮತ್ತು ಎನ್‌ಜಿಒಗಳಿಂದ ಸಹ ಮಹಿಳಾ ಉದ್ಯೋಗಿಗಳನ್ನು ಕಿತ್ತೊಗೆಯಲಾಗಿದೆ.
ಈಗ ಈ ಹೆಂಡತಿ ಮಕ್ಕಳಿಗೆ ಹೊಡಿಯಲು ಗಂಡಸರಿಗೆ ಕೊಟ್ಟಿರುವ ಪರವಾನಗಿ ಕುರಿತು ವಿಶ್ವದ ವಿವಿಧ ಮಹಿಳಾ ಹಕ್ಕುಗಳ ಸಂಘಟನೆಗಳು ಈ ಹೊಸ ದಂಡ ಸಂಹಿತೆಯನ್ನು ಕಟುವಾಗಿ ಟೀಕಿಸಿವೆ. ಇದು ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸುವ ತಂತ್ರವಾಗಿದ್ದು, ಅಫ್ಘಾನಿಸ್ತಾನವನ್ನು ಮಧ್ಯಯುಗದ ಕಾಲಕ್ಕೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿವೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net