ಮೀಸಲಾತಿ ವಿರೋಧಿ ಹೋರಾಟಗಾರರನ್ನು ಭೇಟಿಯಾದ ಕೇಂದ್ರ ಸಚಿವ ಜೆ.ಪಿ.ನಡ್ಡಾ | J P Nadda

ಕೇಂದ್ರ ಸಚಿವ ಜೆ.ಪಿ. ನಡ್ಡಾ
ಕೇಂದ್ರ ಸಚಿವ ಜೆ.ಪಿ. ನಡ್ಡಾ
Published on
ನವದೆಹಲಿ: ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸಿ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಮೀಸಲಾತಿ ಹಟಾವೋ ಆಂದೋಲನದ ಪ್ರತಿನಿಧಿಗಳನ್ನು ಕೇಂದ್ರ ಸಚಿವ ಜೆ.ಪಿ. ನಡ್ಡಾ(J P Nadda) ಗುರುವಾರ(ಆ. 27) ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಆಗಸ್ಟ್ 21ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಬಳಿಕ ಪೂರ್ವನಿರ್ಧರಿತ ವೇಳಾಪಟ್ಟಿ ಪ್ರಕಾರ, ತಂಡದ ಸದಸ್ಯರಾದ ಹರ್ಷ ದುಬೆ, ರಾನ್ ಬಹದ್ದೂರ್ ಸಿಂಗ್ ಚೌಹಾಣ್ ಹಾಗೂ ಮೃತ್ಯುಂಜಯ್ ಪಾಠಕ್ ಅವರೊಂದಿಗೆ ಸೌಹಾರ್ದಯುತ ಚರ್ಚೆಗಳು ನಡೆದವು. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ ನಡ್ಡಾ ಅವರು ಸಭೆಯ ಚರ್ಚೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇನ್ನೂ ಸಭೆ ಬಳಿಕ ಮಾತನಾಡಿರುವ ಹರ್ಷ್ ದುಬೆ, ಇಂದು ಎಲ್ಲಾ ಸಮಾಜದ ಕಲ್ಯಾಣಕ್ಕಾಗಿ ಸಕಾರಾತ್ಮಕ ಬೆಳವಣಿಗೆ ನಡೆದಿದ್ದು, ನಮ್ಮ ತಂಡವು ಗೌರವಾನ್ವಿತ ಜೆ.ಪಿ. ನಡ್ಡಾ ಜಿ ಅವರನ್ನು ಭೇಟಿ ಮಾಡಿತು. ಈ ಸಮಯದಲ್ಲಿ ಆಗಸ್ಟ್ 21ರಂದು ನಡೆದ ಪ್ರತಿಭಟನೆ ಕುರಿತು ಅವರೊಂದಿಗೆ ಸಂಕ್ಷಿಪ್ತ ಚರ್ಚೆ ನಡೆಯಿತು ಎಂದಿದ್ದಾರೆ.
ನಾವು ಶೀಘ್ರದಲ್ಲೇ ನಡ್ಡಾ ಜಿ ಅವರನ್ನು ಮತ್ತೆ ಭೇಟಿಯಾಗುತ್ತೇವೆ. ಮತ್ತು ಎಲ್ಲಾ ಸಮಾಜದ ಹಿತದೃಷ್ಟಿಯಿಂದ ನ್ಯಾಯಯುತವಾಗಿ ಮುಂದುವರೆಯುತ್ತೇವೆ. ನಮ್ಮ ಉದ್ದೇಶ ಯಾವುದೇ ವರ್ಗದ ವಿರುದ್ಧವಲ್ಲ, ಬದಲಾಗಿ ಸಮಾನ ಅವಕಾಶಗಳು, ನ್ಯಾಯಯುತ ವ್ಯವಸ್ಥೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಅಗತ್ಯ ಸುಧಾರಣೆಗಳಿಗಾಗಿ ನಮ್ಮ ಅಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಶಾಂತಿಯುತವಾಗಿ ಪ್ರಸ್ತುತಪಡಿಸುವುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ನಿರ್ಧಾರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಶೈಕ್ಷಣಿಕ ಮತ್ತು ಉದ್ಯೋಗದಲ್ಲಿರುವ ಜಾತಿಯಾಧಾರಿತ ಮೀಸಲಾತಿ ವ್ಯವಸ್ಥೆಯನ್ನು ತೆಗೆದು, ಬಡತನದ ಆಧಾರದಲ್ಲಿ ಮೀಸಲಾತಿ ನೀಡುವಂತೆ ಪರಿಷ್ಕರಣೆಗೆ ಒತ್ತಾಯಿಸಿ ಮೀಸಲಾತಿ ಹಠಾವೋ ಆಂದೋಲನ ನಡೆಸಲಾಗುತ್ತಿದೆ. ಪ್ರಮುಖವಾಗಿ ಒಂದು ಕುಟುಂಬ, ಒಂದು ಮೀಸಲಾತಿ ಎಂಬ ನೀತಿಯನ್ನು ಪ್ರತಿಪಾದಿಸುತ್ತಿದ್ದು, ಜೊತೆಗೆ 2026ರ ಯುಜಿಸಿಯ ಜಾತಿ-ಸಮಾನತೆಯ ನಿರ್ದೇಶನಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net