ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ...ಕೆಲಸವಿಲ್ಲದವರು ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ದಾಳಿ ಮಾಡುತ್ತಾರೆ ಎಂದ ಸಿಜೆಐ ಸೂರ್ಯ ಕಾಂತ್ | CJI SuryaKant

CJI SuryaKant | ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್
CJI SuryaKant | ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್
Published on
CJI SuryaKant: ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಶುಕ್ರವಾರದ ವಿಚಾರಣೆಯೊಂದರಲ್ಲಿ ಕೆಲವು ನಿರುದ್ಯೋಗಿ ಯುವಕರ ಕುರಿತು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಿರುದ್ಯೋಗಿ ಯುವಕರು ಜಿರಳೆಗಳಂತೆ ವರ್ತಿಸುತ್ತಾ, ಮಾಧ್ಯಮದವರು, ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಥವಾ ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ ಎಂದು ಟೀಕಿಸಿದ್ದಾರೆ.
ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ, ವಕೀಲರೊಬ್ಬರನ್ನು ಹಿರಿಯ ವಕೀಲರನ್ನಾಗಿ ನೇಮಿಸುವ ಕುರಿತಾದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಿರಿಯ ವಕೀಲರ ಹುದ್ದೆಯನ್ನು ಪಡೆಯಲು ಅರ್ಜಿದಾರರು ತೋರಿದ ಅತಿಯಾದ ಆತುರ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ನ್ಯಾಯಾಲಯವು ಖಂಡಿಸುತ್ತಾ, ಫೇಸ್‌ಬುಕ್‌ನಲ್ಲಿ ಅವರು ಬಳಸಿದ್ದಾರೆನ್ನಲಾದ ಭಾಷೆ ಮತ್ತು ವೃತ್ತಿಪರ ನಡವಳಿಕೆಯನ್ನುಪ್ರಶ್ನಿಸಿತು.
ಇಡೀ ಜಗತ್ತು ಹಿರಿಯ ವಕೀಲರಾಗಲು ಅರ್ಹವಾಗಿರಬಹುದು, ಆದರೆ ಕನಿಷ್ಠ ನೀವು ಅದಕ್ಕೆ ಅರ್ಹರಲ್ಲ ಎಂದು ಪೀಠವು ಅರ್ಜಿದಾರರಿಗೆ ನೇರವಾಗಿಯೇ ತಿಳಿಸಿತು. ಒಂದು ವೇಳೆ ದೆಹಲಿ ಹೈಕೋರ್ಟ್ ಅರ್ಜಿದಾರರಿಗೆ ಹಿರಿಯ ವಕೀಲ ಹುದ್ದೆಯನ್ನು ನೀಡಿದರೂ ಸಹ, ಅವರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸುತ್ತದೆ ಎಂದು ಸಿಜೆಐ ಸೂರ್ಯ ಕಾಂತ್ ತೀವ್ರ ಬೇಸರ ವ್ಯಕ್ತಪಡಿಸಿದರು.
ವಕೀಲರ ಸಾಮಾಜಿಕ ಜಾಲತಾಣಗಳಲ್ಲಿನ ವರ್ತನೆಯನ್ನು ಉಲ್ಲೇಖಿಸಿದ ಸಿಜೆಐ, ಸಮಾಜದಲ್ಲಿ ಈಗಾಗಲೇ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಪರಾವಲಂಬಿಗಳು ಇದ್ದಾರೆ, ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ..? ಎಂದು ಪ್ರಶ್ನಿಸಿದರು. ಜಿರಳೆಗಳಂತಹ ಯುವಕರು ಇದ್ದಾರೆ, ಅವರಿಗೆ ವೃತ್ತಿಯಲ್ಲಿ ಯಾವುದೇ ಸ್ಥಾನ ಅಥವಾ ಉದ್ಯೋಗ ಸಿಗುವುದಿಲ್ಲ. ಅಂತಹವರು ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ಎಲ್ಲರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ ಎಂದು ಕಟುವಾಗಿ ಟೀಕಿಸಿದರು.
ಹಿರಿಯ ವಕೀಲರ ಹುದ್ದೆಯು ವಕೀಲರ ವೃತ್ತಿಜೀವನಕ್ಕೆ ನೀಡಲಾಗುವ ಒಂದು ಮನ್ನಣೆಯೇ ಹೊರತು, ಅದನ್ನು ಈ ರೀತಿ ಬೆನ್ನಟ್ಟಿ ಪಡೆಯುವುದಲ್ಲ ಎಂದು ಪೀಠವು ಸ್ಪಷ್ಟಪಡಿಸಿದ್ದು, ನೀವು ಈ ಹುದ್ದೆಯ ಹಿಂದೆ ಬಿದ್ದಿದ್ದೀರಿ, ಇದು ಸರಿಯಾಗಿ ಕಾಣುತ್ತಿದೆಯೇ, ಹಿರಿಯ ವಕೀಲರ ಹುದ್ದೆಯು ಕೇವಲ ಅಲಂಕಾರಿಕ ಸ್ಥಾನಮಾನದ ಸಂಕೇತವೇ? ಎಂದು ನ್ಯಾಯಾಲಯ ಪ್ರಶ್ನಿಸಿತು. ಅಲ್ಲದೆ, ಅರ್ಜಿದಾರರಿಗೆ ಬೇರೆ ಯಾವುದೇ ನ್ಯಾಯಾಲಯದ ಕೆಲಸಗಳಿಲ್ಲವೇ ಎಂದು ಪ್ರಶ್ನಿಸಿದ ಪೀಠವು, ಹಿರಿಯ ಹುದ್ದೆಯನ್ನು ಬಯಸುವವರಿಗೆ ಇಂತಹ ನಡವಳಿಕೆ ಶೋಭಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇದೇ ವಿಚಾರಣೆಯ ವೇಳೆ, ಅನೇಕ ವಕೀಲರು ಹೊಂದಿರುವ ಪದವಿಗಳ ಸತ್ಯಾಸತ್ಯತೆಯ ಬಗ್ಗೆಯೂ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಕಪ್ಪು ಕೋಟು ಧರಿಸಿರುವ ಅನೇಕ ವಕೀಲರ ಪದವಿಗಳ ಬಗ್ಗೆ ಗಂಭೀರ ಸಂದೇಹಗಳಿರುವುದರಿಂದ, ಅವುಗಳ ಪರಿಶೀಲನೆ ನಡೆಸಲು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಸೂಚಿಸುವ ಬಗ್ಗೆ ನ್ಯಾಯಾಲಯವು ಆಲೋಚಿಸುತ್ತಿದೆ ಎಂದು ಸಿಜೆಐ ಹೇಳಿದರು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ವಿಷಯದಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ, ಏಕೆಂದರೆ ಅವರಿಗೆ ವಕೀಲರ ಮತಗಳು ಬೇಕು ಎಂದು ನ್ಯಾಯಾಲಯವು ಟೀಕಿಸಿತು.
ನ್ಯಾಯಾಲಯದ ಈ ಕಠಿಣ ಅವಲೋಕನಗಳ ಬಳಿಕ, ಅರ್ಜಿದಾರರು ಪೀಠದ ಕ್ಷಮೆಯಾಚಿಸಿದರು ಮತ್ತು ತಮ್ಮ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಸುಪ್ರೀಂ ಕೋರ್ಟ್ ಅರ್ಜಿಯ ವಾಪಸಾತಿಯನ್ನು ಮಾನ್ಯ ಮಾಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net