ಔತಣಕೂಟದ ನಡುವೆ ಗುಂಡೇಟಿನ ಸದ್ದು!... ಕೂದಲೆಳೆ ಅಂತರದಲ್ಲಿ ಬಚಾವಾದ ಡೊನಾಲ್ಡ್ ಟ್ರಂಪ್ ಹೇಳಿದ್ದೇನು..? | Donald Trump

Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್: ಇಲ್ಲಿನ ಹಿಲ್ಟನ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತಭವನದ ವಾರ್ಷಿಕ ಪತ್ರಿಕಾ ಔತಣಕೂಟದಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸೇರಿದಂತೆ ಹಲವು ಉನ್ನತ ನಾಯಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಅದೃಷ್ಟವಶಾತ್, ಟ್ರಂಪ್ ಮತ್ತು ಅವರ ಸಂಪುಟದ ಸದಸ್ಯರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಭೋಜನಕೂಟ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಬಂದಿದ್ದರಿಂದ ಅಲ್ಲಿ ಸೇರಿದ್ದ ಅತಿಥಿಗಳು ಪ್ರಾಣಭಯದಿಂದ ಮೇಜುಗಳ ಕೆಳಗೆ ಅಡಗಿಕೊಳ್ಳಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ವರದಿಗಾರರನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಟ್ರಂಪ್​ ಕುಳಿತಿದ್ದಾಗಲೇ ಭದ್ರತಾ ತಂಡಗಳು (Tactical teams) ವೇದಿಕೆಯನ್ನು ಆಕ್ರಮಿಸಿಕೊಂಡವು ಮತ್ತು ತಕ್ಷಣವೇ ಅವರನ್ನು ಹಾಗೂ ಇತರ ಪ್ರಮುಖ ನಾಯಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದವು. ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸೇರಿದಂತೆ ಸುಮಾರು 2,600 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಈ ಘಟನೆ ನಡೆದ ಕೂಡಲೇ ಭದ್ರತಾ ಪಡೆಗಳು ಮತ್ತು ಪೊಲೀಸರು ಹೋಟೆಲ್ ಸುತ್ತುವರೆದಿದ್ದು, ಶಂಕಿತ ಶೂಟರ್ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಸೋಸಿಯೇಟೆಡ್ ಪ್ರೆಸ್ (ಎಪಿ) ಪ್ರಕಾರ, ಟ್ರಂಪ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದ ಮುಖ್ಯ ಸಭಾಂಗಣದ ಹೊರಗೆ ಈ ಗುಂಡಿನ ದಾಳಿ ನಡೆದಿದೆ. ಘಟನೆಯ ಬಳಿಕ ಪೋಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಭೋಜನಕೂಟವು ಪುನರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸದಾ ನೆನಪಿನಲ್ಲಿರುವ ಸಂಜೆ ಎಂದ ಟ್ರಂಪ್

ಘಟನೆಯ ಕುರಿತಂತೆ ತಮ್ಮ ಟ್ರೂತ್ ಸೋಶಿಯಲ್​​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್​, ಇದು ಅನೇಕ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ಸಂಜೆಯಾಗಿದ್ದು, ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸಿದ ಭದ್ರತಾ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾರ್ಯಕ್ರಮ ಮುಂದುವರಿಸಲು ನಾನು ಶಿಫಾರಸು ಮಾಡಿದ್ದೇನೆ, ಆದರೆ ಅಂತಿಮ ನಿರ್ಧಾರವನ್ನು ಕಾನೂನು ಜಾರಿ ಸಂಸ್ಥೆಗಳ ಮಾರ್ಗದರ್ಶನದಂತೆ ತೆಗೆದುಕೊಳ್ಳಲಾಗುವುದು. ಏನೇ ಆದರೂ ಈ ಸಂಜೆ ನಿಗದಿತ ಕಾರ್ಯಕ್ರಮಕ್ಕಿಂತ ಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡಿನ ಶಬ್ದ ಕೇಳುತ್ತಿದ್ದಂತೆ ಭದ್ರತಾ ಪಡೆಗಳು ಗನ್ ಶಾಟ್ ಎಂದು ಕೂಗುತ್ತಾ ಎಚ್ಚರಿಕೆ ನೀಡಿದವು, ಇದರಿಂದ ರಾಜಕಾರಣಿಗಳು, ಪತ್ರಕರ್ತರು ಮತ್ತು ಸೆಲೆಬ್ರಿಟಿಗಳು ಸೇರಿದ್ದ ಸಭಾಂಗಣದಲ್ಲಿ ಗೊಂದಲ ಸೃಷ್ಟಿಯಾಯಿತು. ಸಭಾಂಗಣದ ಹತ್ತಿರ ಗುಂಡಿನ ಸದ್ದು ಕೇಳಿದ ಕೂಡಲೇ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಕೆಳಕ್ಕೆ ತಳ್ಳಿ ರಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ.
ಅಚ್ಚರಿ ಎಂಬಂತೆ, ಸುಮಾರು 40 ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಮೇಲೆ ಗುಂಡಿನ ದಾಳಿ ನಡೆದಿದ್ದ ಅದೇ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದ್ದು, 1981, ಮಾರ್ಚ್ 30 ರಂದು ಜಾನ್ ಹಿಂಕ್ಲಿ ಜೂನಿಯರ್ ಎಂಬ ವ್ಯಕ್ತಿ ಹೋಟೆಲ್‌ನಿಂದ ಹೊರಬರುತ್ತಿದ್ದ ರೇಗನ್ ಮೇಲೆ ರಿವಾಲ್ವರ್‌ನಿಂದ ಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಆ ಘಟನೆಯಲ್ಲಿ ರೇಗನ್ ಅವರ ಶ್ವಾಸಕೋಶಕ್ಕೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿತ್ತು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದರು. ಈಗ ಮತ್ತೆ ಅದೇ ಸ್ಥಳದಲ್ಲಿ ಹಾಲಿ ಅಧ್ಯಕ್ಷರಾಗಿರುವ ಟ್ರಂಪ್​ ಮೇಲೆ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net