ಹಳದಿ ಶಾಸ್ತ್ರದ ಸಂಭ್ರಮದ ನಡುವೆ ದುರಂತ; ಊಟ ಸೇವಿಸಿದ 125 ಅತಿಥಿಗಳು ಅಸ್ವಸ್ಥ! | Marriage Celebrations

Marriage Celebrations
Marriage Celebrations
Published on
ಕಲ್ಯಾನ್​ ನಗರ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಭಾನುವಾರ ಸಂಜೆ ನಡೆದ ಪ್ರಿ-ವೆಡಿಂಗ್ (ಮದುವೆ ಪೂರ್ವ) ಕಾರ್ಯಕ್ರಮವೊಂದರಲ್ಲಿ ಭಾರಿ ದುರಂತ ಸಂಭವಿಸಿದೆ.
ಹೌದು, ಹಳದಿ ಶಾಸ್ತ್ರದ ಸಮಾರಂಭದಲ್ಲಿ ಊಟ ಸೇವಿಸಿದ ಸುಮಾರು 125ಕ್ಕೂ ಹೆಚ್ಚು ಜನರಿಗೆ ಆಹಾರ ವಿಷಪೂರಿತವಾಗಿದ್ದು (Food Poisoning), ಎಲ್ಲರೂ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಏನಿದು ಘಟನೆ?

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಗರದ ಖಡಕ್ಪಾಡಾ ಪ್ರದೇಶದಲ್ಲಿರುವ ಖಾಸಗಿ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ (ಜನವರಿ 18) ಸಂಜೆ ಈ ಘಟನೆ ನಡೆದಿದೆ. ಹಳದಿ ಶಾಸ್ತ್ರದ ಅಂಗವಾಗಿ ಸಂಬಂಧಿಕರಿಗೆ ಮತ್ತು ಅತಿಥಿಗಳಿಗೆ ರಾತ್ರಿ ಸುಮಾರು 10 ಗಂಟೆಯ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದಲ್ಲಿ ದಾಲ್, ಅನ್ನ, ಪನೀರ್ ಮತ್ತು ಗಜ್ಜರಿ ಹಲ್ವಾ (Gajar Halwa) ನೀಡಲಾಗಿತ್ತು ಎಂದು ವರದಿಯಾಗಿದೆ.
ಊಟ ಸೇವಿಸಿದ ಕೆಲವೇ ಗಂಟೆಗಳಲ್ಲಿ, ಅಂದರೆ ಮಧ್ಯರಾತ್ರಿ 1 ರಿಂದ 2 ಗಂಟೆಯ ಸುಮಾರಿಗೆ ಅತಿಥಿಗಳಲ್ಲಿ ವಾಂತಿ, ಭೇದಿ ಮತ್ತು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 125ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಕಲ್ಯಾಣ್, ಅಂಬರನಾಥ್ ಮತ್ತು ಮುರ್ಬಾದ್ ಸುತ್ತಮುತ್ತಲಿನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮುಂದೂಡಲ್ಪಟ್ಟ ಮದುವೆ: ಈ ಆಹಾರ ವಿಷಪ್ರಸಾದ ಘಟನೆಯಿಂದ ವಧು ಕೂಡ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಆಕೆಗೆ ತೀವ್ರ ಸುಸ್ತು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಸೋಮವಾರ ನಡೆಯಬೇಕಿದ್ದ ಮದುವೆ ಸಮಾರಂಭವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಈ ಸಮಾರಂಭಕ್ಕೆ ಊಟದ ವ್ಯವಸ್ಥೆಯನ್ನು ಅಹಮದಾಬಾದ್ ಮೂಲದ ಕ್ಯಾಟರಿಂಗ್ ಸಂಸ್ಥೆಯೊಂದು ಒದಗಿಸಿತ್ತು. ವಧುವಿನ ತಂದೆ ನೀಡಿದ ದೂರಿನ ಮೇರೆಗೆ ಖಡಕ್ಪಾಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಹಾರದ ಮಾದರಿಗಳನ್ನು (Samples) ಈಗಾಗಲೇ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕ್ಯಾಟರಿಂಗ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಾದ ಎಲ್ಲಾ 125 ಜನರು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಅತುಲ್ ಜೇಂಡೆ ತಿಳಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net