ನುಸುಳುಕೋರರನ್ನು ರಕ್ಷಿಸುವ ಸಲುವಾಗಿ ಎಸ್​ಐಆರ್​ಗೆ ಟಿಎಂಸಿ ವಿರೋಧ: ಪ್ರಧಾನಿ ಮೋದಿ | Narendra Modi

 ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಒಳನುಸುಳುಕೋರರನ್ನು ರಕ್ಷಿಸಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ಶನಿವಾರ (ಡಿ.20) ನಡೆದ ಸಭೆಯಲ್ಲಿ ವರ್ಚುವಲ್​ ಮೂಲಕ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಬಂಗಾಳದಲ್ಲಿ ಒಳನುಸುಳುವವರು ಟಿಎಂಸಿಯಿಂದ ಪ್ರೋತ್ಸಾಹ ಪಡೆದಿದ್ದಾರೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿನ ಟಿಎಂಸಿಯ ಮಹಾ ಜಂಗಲ್ ರಾಜ್ ಆಡಳಿತವನ್ನು ಬಿಜೆಪಿ ಕೊನೆಗೊಳಿಸಲಿದೆ ಎಂದಿರುವ ಪ್ರಧಾನಿ, ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆಯ ರಾಜಕೀಯ ಆಡಳಿತ ನಡೆಸುತ್ತಿದೆ, ಟಿಎಂಸಿ ಬಿಜೆಪಿಯನ್ನು ವಿರೋಧಿಸಬಹುದು ಆದರೆ ಬಿಹಾರ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಕೇಸರಿ ಪಕ್ಷಕ್ಕೆ ಬಾಗಿಲು ತೆರೆದಿವೆ ಎಂದು ಹೇಳಿದರು. ಬಿಹಾರವು ಜಂಗಲ್ ರಾಜ್ ಆಳ್ವಿಕೆಯನ್ನು ಒಂದೇ ಧ್ವನಿಯಲ್ಲಿ ತಿರಸ್ಕರಿಸಿದ್ದು,0 20 ವರ್ಷಗಳ ಬಳಿಕವೂ ಅಲ್ಲಿನ ಜನ ಬಿಜೆಪಿ ಎನ್‌ಡಿಎಗೆ ಮೊದಲಿಗಿಂತ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಈಗ ನಾವು ಪಶ್ಚಿಮ ಬಂಗಾಳದಲ್ಲಿ ಮಹಾ ಜಂಗಲ್​ ರಾಜ್​ನ್ನು ತೊಡೆದುಹಾಕಬೇಕಿದೆ ಎಂದರು.
ಹವಾಮಾನ ವೈಪರಿತ್ಯದಿಂದಾಗಿ ನಾಡಿಯಾ ತಲುಪಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು ಬಿಜೆಪಿ ಎಲ್ಲಾ ಹಂತದಲ್ಲಿಯೂ ಖಚಿತಪಡಿಸುತ್ತದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಬಂಗಾಳದ ಎಲ್ಲಾ ಭಾಗಗಳಿಗೂ ಸಂಪರ್ಕವನ್ನು ಒದಗಿಸುವ ಪಕ್ಷದ ಇಚ್ಛೆಗೆ ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದರು.
ಟಿಎಂಸಿ ನಾಯಕರು ನಮ್ಮನ್ನು ತಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಂಡು ವಿರೋಧಿಸಲಿ, ಆದರೆ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅಡ್ಡಿಪಡಿಸುವುದೇಕೆ ಎಂದು ಪ್ರಶ್ನಿಸಿದ ಪ್ರಧಾನಿ, ನೀವು ಮೋದಿಯನ್ನು ವಿರೋಧಿಸಬಹುದು, ಆದರೆ ಬಂಗಾಳದ ಜನರ ಸಂತೋಷವನ್ನು ಕಿತ್ತುಕೊಳ್ಳಬೇಡಿ, ಅವರ ಹಕ್ಕುಗಳನ್ನು ಕಸಿದುಕೊಳ್ಳಬೇಡಿ. ಅವರ ಕನಸುಗಳನ್ನು ಛಿದ್ರಗೊಳಿಸುವ ಪಾಪವನ್ನು ಮಾಡಬೇಡಿ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಅವಕಾಶ ನೀಡುವಂತೆ ಕೈಜೋಡಿಸಿ ಮನವಿ ಮಾಡಿದರು.

ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ ಪ್ರಧಾನಿ ಮೋದಿ ಸುಮಾರು 3,200 ಕೋಟಿ ರೂ. ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ-34 ರ ಬಾರಜಗುಲಿ-ಕೃಷ್ಣನಗರ ವಿಭಾಗದ 66.7 ಕಿ.ಮೀ ಉದ್ದದ ನಾಲ್ಕು ಪಥ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ-34 ರ 17.6 ಕಿ.ಮೀ ಉದ್ದದ ಬಾರಸತ್-ಬಾರಜಗುಲಿ ವಿಭಾಗದ ನಾಲ್ಕು ಪಥ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಯೋಜನೆಗಳು ಕೋಲ್ಕತ್ತಾವನ್ನು ಸಿಲಿಗುರಿಯೊಂದಿಗೆ ಸಂಪರ್ಕಿಸಲು ನೆರವಾಗುವುದರೊಂದಿಗೆ, ಜನರ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸುಧಾರಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net