ಇದು 'ಚುನಾವಣಾ ಆಯೋಗ'ವಲ್ಲ, 'ವಾಟ್ಸಾಪ್ ಆಯೋಗ' ಎಂದ ದೀದಿ! ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಗಂಭೀರ ಆರೋಪ | Mamata Banerjee
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸುಪ್ರೀಂ ಕೋರ್ಟ್
Published on:
Copied
Follow Us
ನವದೆಹಲಿ: ಬುಧವಾರ (ಫೆ.4) ಸುಪ್ರೀಂ ಕೋರ್ಟ್‌ಗೆ ಹಾಜರಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ನಾನು ಚುನಾವಣಾ ಆಯೋಗಕ್ಕೆ ಹಲವು ಬಾರಿ ಪತ್ರ ಬರೆದಿದ್ದೆನೆ, ಆದರೆ ನ್ಯಾಯವು ಬಾಗಿಲಿನ ಹಿಂದೆ ಅಳುತ್ತಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಯ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಬ್ಯಾನರ್ಜಿ ಇಂದು ಸುಪ್ರೀಂ ಕೋರ್ಟ್ (Supreme Court) ಮುಂದೆ ಖುದ್ದಾಗಿ ಹಾಜರಾದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ.ಪಂಚೋಲಿ ಅವರ ನ್ಯಾಯಪೀಠ ಮಮತಾ ಬ್ಯಾನರ್ಜಿ, ಮೊಸ್ತಾರಿ ಬಾನು ಮತ್ತು ಟಿಎಂಸಿ ಸಂಸದರಾದ ಡೆರೆಕ್ ಒ'ಬ್ರೇನ್ ಮತ್ತು ಡೋಲಾ ಸೇನ್ ಅವರು ತಮ್ಮ ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ/ ಅನ್ಯಾಯ ನಡೆದಿದೆ ಎಂದು ಸಲ್ಲಿಸಲಾದ ಅರ್ಜಿಗಳ ಕುರಿತು ವಿಚಾರಣೆ ನಡೆಸಿತು.
ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ವಾಟ್ಸಾಪ್ ಆಯೋಗ ಎಂದು ಕರೆದರು ಮತ್ತು ಚುನಾವಣಾ ಸಂಸ್ಥೆಯು ಎಸ್‌ಐಆರ್‌ಗೆ ಸರ್ಕಾರಿ ದಾಖಲೆಗಳನ್ನು ಅನುಮತಿಸುತ್ತಿಲ್ಲ ಎಂದು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆ ಕೇವಲ ಮತದಾರರ ಹೆಸರನ್ನು ಅಳಿಸುವ ಪ್ರಕ್ರಿಯೆಯಾಗಿದೆ. ಸರ್, ಸಮಸ್ಯೆ ಏನೆಂದರೆ ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ ಆರು ಬಾರಿ ಪತ್ರ ಬರೆದಿದ್ದರೂ ಇನ್ನೂ ಯಾವುದೇ ಉತ್ತರ ಬಂದಿಲ್ಲ. ನ್ಯಾಯವು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದೆ ಎಂದು ಮುಖ್ಯಮಂತ್ರಿ ತಮ್ಮ ವಾದವನ್ನು ಆರಂಭಿಸಿದರು.
ವಾದವನ್ನು ಮುಂದುವರೆಸುತ್ತಾ ಮಮತಾ ಬ್ಯಾನರ್ಜಿ, ಈ ಎಸ್‌ಐಆರ್ ಎನ್ನುವುದು ಕೇವಲ ಬಂಗಾಳದಲ್ಲಿ ಮಾತ್ರ ನಡೆಯುತ್ತಿದೆ. ಇದೇ ವರ್ಷ ಅಸ್ಸಾಂನಲ್ಲಿ ಸಹ ಚುನಾವಣೆಯಿದೆ ಆದರೆ ಅಲ್ಲಿ ಯಾವುದೇ ಮತದಾರರ ಪರಿಷ್ಕರಣೆ ನಡೆಯುತ್ತಿಲ್ಲ ಎಂದು ನ್ಯಾಯಪೀಠದ ಮುಂದೆ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಕೇಂದ್ರ ಸರ್ಕಾರ ಮಾಡುತ್ತಿರುವ ಪಿತೂರಿಯಲ್ಲಿ ಚುನಾವಣಾ ಆಯೋಗ ಬೆಂಬಲ ನೀಡುತ್ತಿದೆ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಮತಾ ಬ್ಯಾನರ್ಜಿ ನ್ಯಾಯಪೀಠವನ್ನು ಕೇಳಿಕೊಂಡಿದ್ದಾರೆ.
ಈ ಆರೋಪಗಳಿಗೆ ಪ್ರತ್ಯತ್ತರ ನೀಡಿದ ಚುನಾವಣಾ ಆರೋಗದ ಪರ ವಕೀಲರು, ಪಶ್ಚಿಮ ಬಂಗಾಳದಲ್ಲಿ ಸರಿಯಾಗಿ ಮತದಾರರ ಪರಿಷ್ಕರಣೆಯನ್ನು ನಡೆಸಲು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಡ್ಡ ಪಡಿಸುತ್ತಿದೆ ಎಂದು ವಾದ ಮಂಡಿಸಿದರು.
ಮಮತಾ ಅವರ ವಾದವನ್ನು ಆಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ನಿಮ್ಮ ಮುಂದಿನ ವಾದವನ್ನು ವಕೀಲರ ಮೂಲಕ ನಡೆಸಿ ಎಂದು ಮಮತಾ ಅವರಿಗೆ ಹೇಳಿದೆ ಮತ್ತು ತಮ್ಮ ಮೇಲೆ ಹೊರಿಸಲಾದ ಆರೋಪಗಳಿಗೆ ಉತ್ತರಿಸಲು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ,(ಏಜನ್ಸೀಸ್).