ಈ ದೇಶದಲ್ಲಿ ಲೀಟರ್​ ಪೆಟ್ರೋಲ್​ 2.20 ರೂ. ಅಷ್ಟೇ! ಅಗ್ಗ ಬೆಲೆಗೆ ಇಂಧನ ಕೊಟ್ಟು ಜನರ ಹಣ ಉಳಿಸುತ್ತಿರುವ ರಾಷ್ಟ್ರಗಳಿವು | Cheapest Petrol

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ, ಭಾರತದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 110ರಿಂದ 116 ರೂ. ಇದೆ (ಆಯಾ ರಾಜ್ಯಗಳ ಅನ್ವಯ)
  • ತೈಲ ಸಮೃದ್ಧಿ ರಾಷ್ಟ್ರಗಳಲ್ಲಿ ಇಂಧನ ಬೆಲೆಗಳು ಭಾರಿ ಅಗ್ಗ
  • ಅತ್ಯಂತ ಕಡಿಮೆ ಬೆಲೆಗೆ ಪೆಟ್ರೋಲ್ ಕೊಡುವ ಮೂಲಕ ಗ್ರಾಹಕರ ಜೇಬು ಗಟ್ಟಿ ಮಾಡುತ್ತಿರುವ ರಾಷ್ಟ್ರಗಳಿವು
Cheapest Petrol: ಬೆಳಗಾದರೆ ಕೆಲಸಕ್ಕೆ ಹೋಗಬೇಕಲ್ಲ ಎಂದು ಬೇಸರದಿಂದಲೇ ಎದ್ದೇಳುವ ಜನರು, ತಮ್ಮ ತಮ್ಮ ವಾಹನಗಳಿಗೆ ಇಂಧನ ತುಂಬಿಸಿ, ಆ ಬಿಗಿ ಟ್ರಾಫಿಕ್​ ಮಧ್ಯೆ ಗಂಟೆ ಗಂಟೆಗಟ್ಟಲೇ ಕಾದು ಕಡೆಗೂ ಆಫೀಸು ಸೇರುವಂತೆ, ಇತರೆ ಕೆಲಸಗಳಿಗೂ ವಾಹನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಬರುವ ಸಂಬಳದಲ್ಲಿ ಬಹುತೇಕ ಖರ್ಚು ಗಾಡಿಯ ಇಂಧನಕ್ಕೆ ಕಳೆಯುವ ಮಂದಿ, ಬೇರೆ ಬೆಲೆಗಳಂತೆ ಏಕೆ ಪೆಟ್ರೋಲ್​, ಡಿಸೇಲ್​ ಬೆಲೆಯಲ್ಲಿ ಇಳಿಕೆ ಕಾಣೋದಿಲ್ಲ. ಅದರಿಂದ ನಮಗೇಕೆ ರಿಲೀಫ್​ ಇಲ್ಲ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ತಮ್ಮಲ್ಲೇ ಹಾಕಿಕೊಳ್ಳುತ್ತ, ಆಯಾ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ. ಆದ್ರೆ, ಅಚ್ಚರಿ ಎನ್ನುವಂತೆ ಕೆಲವೇ ಕೆಲವು ದೇಶಗಳು ಇಂದಿಗೂ ಪ್ರತಿ ಲೀಟರ್​ ಪೆಟ್ರೋಲ್ ಅನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿವೆ ಎಂಬ ಸಂಗತಿ ತಿಳಿದರೆ ನಿಜಕ್ಕೂ ನಿಮ್ಮ ಹುಬ್ಬೇರುತ್ತೆ. ​ 

ಇಂಧನ ದರಕ್ಕೆ ಬಿಸಿ

ಕಳೆದ ದಶಕದಲ್ಲಿ ಪ್ರಪಂಚದಾದ್ಯಂತ ಪೆಟ್ರೋಲ್ ಬೆಲೆಗಳು ಗಗನಕ್ಕೇರಿವೆ. ಅದು ಬಹುತೇಕರಿಗೆ ಗೊತ್ತೇ ಇರುವ ಸಂಗತಿ. ಸಂಪನ್ಮೂಲಗಳ ಕ್ಷೀಣತೆ, ಮಧ್ಯಪ್ರಾಚ್ಯ ದೇಶಗಳಲ್ಲಿನ ಸಂಘರ್ಷಗಳು, ರಷ್ಯಾ-ಉಕ್ರೇನ್, ಇರಾನ್​-ಅಮೆರಿಕ ಯುದ್ಧಗಳು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ ಸೇರಿ ಹಲವಾರು ಕಾರಣಗಳಿಂದಾಗಿ ಇಂಧನ ಬೆಲೆ ದುಪ್ಪಟ್ಟಾಗಿವೆ. ಇದು ನಮ್ಮ ದೇಶದ ಮೇಲೂ ದೊಡ್ಡ ಪರಿಣಾಮ ಬೀರಿದ್ದು, ಈಗಾಗಲೇ 110 ರೂ.ಗೆ ತಲುಪಿರುವ ಬೆಲೆಯಿಂದ ಜನರ ಜೇಬಿಗೆ ಕತ್ತರಿ ಹಾಕಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ. 
ವಿಶ್ವದಲ್ಲೇ ಅತಿ ಹೆಚ್ಚು ಪೆಟ್ರೋಲ್ ದರವನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದು. ಪ್ರಸ್ತುತ, ಲೀಟರ್​ ಪೆಟ್ರೋಲ್​ ದರವು ದೆಹಲಿಯಲ್ಲಿ 102.12 ರೂ. ಇದೆ. ಈ ಬೆಲೆಯು ಆಯಾ ರಾಜ್ಯಗಳಲ್ಲಿ ಸ್ಥಳೀಯ ಟ್ಯಾಕ್ಸ್​ ಮತ್ತು ವ್ಯಾಟ್​ನಿಂದ ಬದಲಾಗುತ್ತದೆ. ಆದರೆ, ಇದೇ ಹಲವಾರು ತೈಲ ಸಮೃದ್ಧ ದೇಶಗಳಲ್ಲಿ ಇಂದಿಗೂ ಪೆಟ್ರೋಲ್ ಬೆಲೆ ಬಹಳ ಕಡಿಮೆ ದರದಲ್ಲಿ ಲಭಿಸುತ್ತಿವೆ. ಯಾವ ರಾಷ್ಟ್ರಗಳು ಈ ಸಾಲಿನಲ್ಲಿದೆ ಎಂಬ ಕುತೂಹಲಕಾರಿ ಸಂಗತಿ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ ಮಾಹಿತಿ. 

ಯಾವ ದೇಶಗಳಲ್ಲಿ ಅಗ್ಗ ಬೆಲೆಗೆ ಪೆಟ್ರೋಲ್​?

ಜಾಗತಿಕ ಪೆಟ್ರೋಲ್ ಬೆಲೆಯ ಪ್ರಕಾರ, ಲಿಬಿಯಾ ಮತ್ತು ಇರಾನ್ ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ಬೆಲೆಯನ್ನು ಹೊಂದಿವೆ. ಈ ದರಗಳು ಲೀಟರ್‌ಗೆ ಕೇವಲ 2.15 ರೂ.ನಿಂದ 3 ರೂ.ವರೆಗೆ ಇವೆ. ವಿಶ್ವದ ಅಗ್ಗದ ಪೆಟ್ರೋಲ್ ಬೆಲೆಗಳಲ್ಲಿ ಲಿಬಿಯಾ ಅಗ್ರಸ್ಥಾನದಲ್ಲಿದೆ. ಪ್ರಸ್ತುತ, ಇಲ್ಲಿ ಲೀಟರ್‌ಗೆ ಕೇವಲ 0.024 ಡಾಲರ್​ಗೆ​ ( ಅಂದರೆ ಸುಮಾರು 2.20 ರೂ.) ಮಾರಾಟ ಮಾಡಲಾಗುತ್ತಿದೆ. 

ಇನ್ಯಾವ ದೇಶಗಳು ಪಟ್ಟಿಯಲ್ಲಿ?

ವಿಶ್ವದ ಅಗ್ಗದ ಪೆಟ್ರೋಲ್ ಪಟ್ಟಿಯಲ್ಲಿ ಇರಾನ್ ಎರಡನೇ ಸ್ಥಾನದಲ್ಲಿದೆ.  ಇಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 2.77 ರೂ. ಇದೆ. ಪಾಶ್ಚಿಮಾತ್ಯ ನಿರ್ಬಂಧಗಳು ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ನೊಂದಿಗೆ ನಿರಂತರ ಸಂಘರ್ಷದ ಹೊರತಾಗಿಯೂ, ಇಸ್ಲಾಮಿಕ್ ರಾಷ್ಟ್ರವು ತನ್ನ ನಾಗರಿಕರಿಗೆ ಕಡಿಮೆ ದರದಲ್ಲಿ ಇಂಧನವನ್ನು ಒದಗಿಸಲು ದೃಢವಾದ ಪೆಟ್ರೋಲ್ ಸಬ್ಸಿಡಿ ನೀತಿಯನ್ನು ನಿರ್ವಹಿಸುತ್ತಿರುವುದು ಗಮನಾರ್ಹ. 
ಒಂದು ಕಾಲದಲ್ಲಿ ವಿಶ್ವದ ಅಗ್ಗದ ಪೆಟ್ರೋಲ್ ಉತ್ಪಾದಕ ಎಂದು ಗುರುತಿಸಿಕೊಂಡಿದ್ದ ವೆನೆಜುವೆಲಾ, ಈಗ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ರಾಷ್ಟ್ರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.34 ರೂ. ಇದೆ. ಲಿಬಿಯಾ, ಇರಾನ್ ಮತ್ತು ವೆನೆಜುವೆಲಾ ಹೊರತುಪಡಿಸಿ, ಕುವೈತ್ ಮತ್ತು ಅಂಗೋಲಾ ಸಹ ತನ್ನ ನಾಗರಿಕರಿಗೆ ಕಡಿಮೆ ದರದಲ್ಲಿ ಇಂಧನವನ್ನು ಪೂರೈಸುತ್ತಿವೆ. ಅಂಗೋಲಾದಲ್ಲಿ, ಲೀಟರ್‌ಗೆ 31.21 ರೂಪಾಯಿ ಇದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net