ಇದು ಸಾಮಾನ್ಯ ಜಯವಲ್ಲ...ಗೆಲುವಿನ ರುಚಿ ವಿಭಿನ್ನವಾಗಿದೆ ಎಂದು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಅಭಿನಂದಿಸಿದ ಸಿಎಂ ಫಡ್ನವೀಸ್ | BMC Win

BMC Win |  ಮಹಾರಾಷ್ಟ್ರ ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಅಭಿನಂದಿಸಿದ ಸಿಎಂ ಫಡ್ನವೀಸ್
BMC Win | ಮಹಾರಾಷ್ಟ್ರ ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಅಭಿನಂದಿಸಿದ ಸಿಎಂ ಫಡ್ನವೀಸ್
Published on
ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ (BMC) ಬಿಜೆಪಿ ನೇತೃತ್ವದ ಮೈತ್ರಿಕೂಟ ಜಯಗಳಿಸಿದ ಬಳಿಕ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್​​ಗೆ ಕರೆ ಮಾಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಚುನಾವಣೆಯಲ್ಲಿನ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಚವಾಣ್​ರೊಂದಿಗೆ ಮಾತನಾಡಿರುವ ಫಡ್ನವೀಸ್​, ಚುನಾವಣೆಯಲ್ಲಿನ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಮಹಾರಾಷ್ಟ್ರದಲ್ಲಿ ಪಕ್ಷವನ್ನು ಮುನ್ನಡೆಸಿದ ರೀತಿಗೆ ಬೆನ್ನುತಟ್ಟಿದ್ದು, ಬಿಎಂಸಿಯಲ್ಲಿನ ಗೆಲುವು ಇತರ ಎಲ್ಲಾ ವಿಜಯಗಳಿಗಿಂತ ಭಿನ್ನವಾಗಿದೆ ಎಂದು ಬಣ್ಣಿಸಿದ್ದಾರೆ.
ಸಿಎಂ ಫಡ್ನವೀಸ್ ಕೆಲ ಹೊತ್ತಲ್ಲೇ ಮುಂಬೈನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದು, ಅಲ್ಲಿ ಸನ್ಮಾನ ಸ್ವೀಕರಿಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಗೆಲುವಿಗೆ ಅಭಿನಂದಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಐತಿಹಾಸಿಕ ಜನಾದೇಶವನ್ನು ಪಡೆದುಕೊಂಡಿದ್ದು, ಸುಮಾರು ಮೂರು ದಶಕಗಳ ಠಾಕ್ರೆ ಕುಟುಂಬದ ಪ್ರಾಬಲ್ಯವನ್ನು ಅಂತ್ಯಗೊಳಿಸಿದೆ. ಮಹಾಯುತಿ ಮೈತ್ರಿಕೂಟ 118 ಸ್ಥಾನಗಳನ್ನು ಗೆದ್ದು ಚುನಾವಣೆಯಲ್ಲಿ ಭರ್ಜರಿ ಜಯದ ಹೊಸ್ತಿಲಲ್ಲಿದ್ದು, ಬಿಜೆಪಿ 90 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಇತ್ತ ಶಿವಸೇನೆ (ಶಿಂಧೆ) 28 ಸ್ಥಾನಗಳೊಂದಿಗೆ ಮುನ್ನಡೆಯಲ್ಲಿದೆ.
ಈ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಉತ್ತಮ ಪ್ರದರ್ಶನ ನೀಡಿದರೂ ಕೂಡ ಇದು ಆ ಪಕ್ಷದ ಪಾಲಿಗೆ ದೊಡ್ಡ ಹೊಡೆತ. ಪ್ರಸ್ತುತ 65 ಸ್ಥಾನಗಳೊಂದಿಗೆ ಮುನ್ನಡೆಯಲ್ಲಿರುವ ಉದ್ಧವ್​ ಸೇನೆ ಕಳೆದ ಚುನಾವಣೆಯಲ್ಲಿ 84 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಬಿಜೆಪಿ 82 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಬಿಎಂಸಿ ಚುನಾವಣೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಶರದ್​ ಪವಾರ್ ಮತ್ತು ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ ಚುನಾವಣೆಯಲ್ಲಿ ವೈಫಲ್ಯ ಅನುಭವಿಸಿದ್ದು, ಇಲ್ಲಿಯವರೆಗಿನ ಫಲಿತಾಂಶದ ಪ್ರಕಾರ ಎನ್‌ಸಿಪಿ ಶೂನ್ಯ ಸಾಧನೆ ಮಾಡಿದ್ದು, ಎಂಎನ್‌ಎಸ್ ಎಂಟು ಸ್ಥಾನಗಳಲ್ಲಿ, ಅಜಿತ್ ಪವಾರ್​ರ ಎನ್‌ಸಿಪಿ ಮೂರು, ಕಾಂಗ್ರೆಸ್ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net