ಯಾವ ಗ್ರಂಥದಲ್ಲೂ ಧ್ವನಿವರ್ಧಕದ ಉಲ್ಲೇಖವಿಲ್ಲ: ರಂಜಾನ್​ನಲ್ಲಿ ಮೈಕ್​ ಬಳಕೆಗೆ ಬಿಜೆಪಿ ತಗಾದೆ; ಧಾರ್ಮಿಕ ಸ್ವಾತಂತ್ರ್ಯ ಎಂದ ಕಾಂಗ್ರೆಸ್ | Ramzan

ಬಿಜೆಪಿ ಶಾಸಕ ಗೋಪಾಲ್ ಶರ್ಮಾ, ವಿಧಾನಸಭೆಯ ಮುಖ್ಯ ಸಚೇತಕ ರಫೀಕ್ ಖಾನ್,
ಬಿಜೆಪಿ ಶಾಸಕ ಗೋಪಾಲ್ ಶರ್ಮಾ, ವಿಧಾನಸಭೆಯ ಮುಖ್ಯ ಸಚೇತಕ ರಫೀಕ್ ಖಾನ್,
Published on

ಪ್ರಮುಖ ಮುಖ್ಯಾಂಶಗಳು

  • ಜೈಪುರದಲ್ಲಿ ಜೋರಾದ ರಂಜಾನ್​ ಗಲಾಟೆ
  • ಧ್ವನಿ ವರ್ಧಕವನ್ನು ನಿರ್ಭಂಧಿಸುವಂತೆ ಬಿಜೆಪಿ ನಾಯಕರ ಪಟ್ಟು
  • ಅದು ಅವರ ಧಾರ್ಮಿಕ ಸ್ವಾತಂತ್ರ್ಯ ಎನ್ನುತ್ತಿರುವ ಕಾಂಗ್ರೆಸ್​
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ರಂಜಾನ್ (Ramzan) ಮಾಸದ ಸಡಗರದ ನಡುವೆಯೇ ಧ್ವನಿವರ್ಧಕಗಳ ಸದ್ದು ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಹವಾಮಹಲ್ ಶಾಸಕ ಬಾಲ್ಮುಕುಂದ್ ಆಚಾರ್ಯ ಅವರ ಬೆನ್ನಲ್ಲೇ, ಇದೀಗ ಸಿವಿಲ್ ಲೈನ್ಸ್ ಶಾಸಕ ಗೋಪಾಲ್ ಶರ್ಮಾ ಕೂಡ ಧ್ವನಿವರ್ಧಕ ನಿಷೇಧದ ಪರ ಬ್ಯಾಟ್ ಬೀಸಿದ್ದು, ರಾಜ್ಯದಲ್ಲಿ ಪರ-ವಿರೋಧದ ಚರ್ಚೆ ತಾರಕಕ್ಕೇರಿದೆ.

ಯಾವ ಗ್ರಂಥದಲ್ಲೂ ಮೈಕ್ ಬಗ್ಗೆ ಉಲ್ಲೇಖವಿಲ್ಲ!

ಬಿಜೆಪಿ ಶಾಸಕ ಗೋಪಾಲ್ ಶರ್ಮಾ, ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಧ್ವನಿವರ್ಧಕ ಬಳಸಬೇಕು ಎಂದು ಬರೆದಿಲ್ಲ. ಇದು ಕೇವಲ ಜನರ ಹಠಮಾರಿತನ ಅಷ್ಟೇ. ಮೈಕ್‌ಗಳಿಂದ ಹೊರಹೊಮ್ಮುವ ಶಬ್ದದಿಂದ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ. ವೃದ್ಧರು ಮತ್ತು ಅನಾರೋಗ್ಯ ಪೀಡಿತರು ನೆಮ್ಮದಿಯಾಗಿ ಮಲಗಲು ಸಾಧ್ಯವಾಗುತ್ತಿಲ್ಲ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರು ತಮ್ಮ ನಂಬಿಕೆಯನ್ನು ಆಚರಿಸಲಿ, ಆದರೆ ಅದು ಇತರರಿಗೆ ಅನಾನುಕೂಲ ಉಂಟುಮಾಡಬಾರದು ಎನ್ನುವುದು ಶರ್ಮಾ ಅವರ ವಾದ. ಇದೇ ವೇಳೆ ಹಿಂದೂ ಧರ್ಮದ ಬಗ್ಗೆ ಮಾತನಾಡಿದ ಅವರು, ಹಿಂದೂ ಧರ್ಮದ ಆಚರಣೆಗಳಲ್ಲಿ ಶಬ್ದವಿರುವುದು ಕೆಲವೇ ಕ್ಷಣಗಳು ಮಾತ್ರ, ಅದು ನಿರಂತರವಾಗಿ ಇರುವುದಿಲ್ಲ, ಎಂದು ಸಮರ್ಥಿಸಿಕೊಂಡಿದ್ದಾರೆ.

ಇದು ಟಾರ್ಗೆಟ್ ರಾಜಕಾರಣ: ಕಾಂಗ್ರೆಸ್

ಬಿಜೆಪಿ ನಾಯಕರ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ವಿಧಾನಸಭೆಯ ಮುಖ್ಯ ಸಚೇತಕ ರಫೀಕ್ ಖಾನ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇದು ಸಂಪೂರ್ಣವಾಗಿ ಅಸಂವಿಧಾನಿಕ ನಡೆ. ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಹಕ್ಕಿದೆ.
ಧ್ವನಿವರ್ಧಕಗಳ ಬಳಕೆ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಗ ಅದನ್ನು ವಿರೋಧಿಸುತ್ತಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಇದು ಮನುವಾದಿ ಚಿಂತನೆಯ ಫಲ ಎಂದು ಹೇಳಿರುವ ರಫೀಕ್ ಖಾನ್, ಬಿಜೆಪಿಯು ಚುನಾವಣೆ ಅಥವಾ ರಾಜಕೀಯ ಲಾಭಕ್ಕಾಗಿ ಇಂತಹ ಸೂಕ್ಷ್ಮ ವಿಷಯಗಳನ್ನು ಕೆದಕುತ್ತಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಚರ್ಚೆ

ಜೈಪುರದಲ್ಲಿ ಈಗಾಗಲೇ ಬಲ್ಮುಕುಂದ್ ಆಚಾರ್ಯ ಅವರು ಧ್ವನಿವರ್ಧಕಗಳ ವಿರುದ್ಧ ಧ್ವನಿ ಎತ್ತಿದ್ದರು. ಈಗ ಮತ್ತೊಬ್ಬ ಶಾಸಕರು ಅದಕ್ಕೆ ಧ್ವನಿಗೂಡಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ರಂಜಾನ್ ಸಮಯದಲ್ಲಿ ಈ ವಿವಾದ ಮುನ್ನೆಲೆಗೆ ಬಂದಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲೂ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ.
ಕೆಲವರು ಶಬ್ದ ಮಾಲಿನ್ಯದ ದೃಷ್ಟಿಯಿಂದ ಇದನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಇದು ಧಾರ್ಮಿಕ ಹಸ್ತಕ್ಷೇಪ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net