ನಾನು ಹೇಳಿದ್ದೇ ನಿಜವಾಯ್ತು!.. ನಿತೀಶ್ ನಿರ್ಗಮನದ ಬಗ್ಗೆ ತೇಜಸ್ವಿ ಯಾದವ್​ ನುಡಿದಿದ್ದ ಭವಿಷ್ಯ ಅಕ್ಷರಶಃ ಸತ್ಯ! | Tejashwi Yadav

Tejashwi Yadav | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ವಿಪಕ್ಷ ನಾಯಕ ತೇಜಸ್ವಿ ಯಾದವ್
Tejashwi Yadav | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ವಿಪಕ್ಷ ನಾಯಕ ತೇಜಸ್ವಿ ಯಾದವ್
Published on
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಯ ಹಾದಿ ಹಿಡಿಯುತ್ತಿದ್ದಂತೆಯೇ, ಇತ್ತ ಎನ್​ಡಿಎ ಮೈತ್ರಿಕೂಟದ ವಿರುದ್ಧ ವಿಪಕ್ಷ ನಾಯಕ ತೇಜಸ್ವಿ ಯಾದವ್ (Tejashwi Yadav) ವಾಗ್ದಾಳಿ ನಡೆಸಿದ್ದಾರೆ.
ಪಟನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್​ಜೆಡಿ ನಾಯಕ ತೇಜಸ್ವಿ, ನಿತೀಶ್ ಕುಮಾರ್ ತಮ್ಮ ಅಧಿಕಾರಾವಧಿ ಪೂರೈಸುವುದಿಲ್ಲ ಮತ್ತು ಬಿಹಾರದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ ಎಂದು ಈ ಹಿಂದೆಯೇ ಹೇಳಿರುವುದಾಗಿ ತಿಳಿಸಿದ್ದು, ಈಗಿನ ಬೆಳವಣಿಗೆಗಳು ತಮ್ಮ ಭವಿಷ್ಯವಾಣಿಯನ್ನು ನಿಜ ಮಾಡಿವೆ ಎಂದರು.

ರಬ್ಬರ್ ಸ್ಟ್ಯಾಂಪ್ ಸಿಎಂ ಬರ್ತಾರೆ..

ಹಿಂದುಳಿದ ನಾಯಕರು ಅಧಿಕಾರದಲ್ಲಿ ಉಳಿಯಲು ಬಿಜೆಪಿ ಯಾವತ್ತೂ ಬಿಡುವುದಿಲ್ಲ, ಮಹಾರಾಷ್ಟ್ರ ಮಾದರಿಯನ್ನು ಈಗ ಬಿಹಾರಕ್ಕೆ ತರಲಾಗಿದ್ದು, ರಾಜ್ಯದಲ್ಲಿ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಯೊಬ್ಬರು ಆಯ್ಕೆಯಾಗಲಿದ್ದಾರೆ ಎಂದು ಟೀಕಿಸಿದರು. 
ನಿತೀಶ್ ಕುಮಾರ್ ಈಗ ಸ್ವತಂತ್ರವಾಗಿಲ್ಲ, ಅವರನ್ನು ಬಿಜೆಪಿ ಹೈಜಾಕ್ ಮಾಡಿದೆ. ಇಂದು ನಡೆಯುತ್ತಿರುವ ಬೆಳವಣಿಗೆಗಳೇ ಇದಕ್ಕೆ ಜೀವಂತ ಸಾಕ್ಷಿ. ಈ ಅಧಿಕಾರ ಬದಲಾವಣೆ ಜನರ ತೀರ್ಪಿಗೆ ವಿರುದ್ಧವಾಗಿದೆ, ಕೇಸರಿ ಪಕ್ಷ ಯಾರ ಜೊತೆಗಿದ್ದರೂ, ಅದು ಮೊದಲು ತನ್ನ ಮಿತ್ರಪಕ್ಷಗಳನ್ನೇ ನಿರ್ಮೂಲನೆ ಮಾಡುತ್ತದೆ ಎನ್ನುವುದು ಜಗತ್ತಿಗೇ ತಿಳಿದಿರುವ ವಿಷಯ. ಈಗ ಜೆಡಿಯು ವಿಷಯದಲ್ಲೂ ಅದೇ ಆಗುತ್ತಿದೆ ಎಂದರು.

ಆರ್​ಎಸ್​ಎಸ್​ ಕಾರ್ಯಸೂಚಿ

ಬಿಜೆಪಿ ಎಲ್ಲಿಗೆ ಹೋದರೂ ತನ್ನ ಮೂಲ ಉದ್ದೇಶವಾದ ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಜಾರಿಗೆ ತರಲು ಬಯಸುತ್ತದೆ. ಬಿಹಾರದಲ್ಲಿ ಈಗ ಅದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಜನರು ಯಂತ್ರೋಪಕರಣಗಳೊಂದಿಗೆ ರಾಜಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಇವರಿಂದಾಗಿ ಪ್ರಜಾಪ್ರಭುತ್ವ ಇಂದು ಹಳ್ಳ ಹಿಡಿದಿದೆ. ಬಿಹಾರದ ಜನರು ಈ ಎಲ್ಲ ಮೋಸದಾಟಗಳನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗುತ್ತಿದ್ದಾರೆ, ಅವರ ಪರಿಸ್ಥಿತಿಯ ಬಗ್ಗೆ ನಮಗೆ ವೈಯಕ್ತಿಕವಾಗಿ ಸಹಾನುಭೂತಿ ಇದೆ. ಒಬ್ಬ ಹಿರಿಯ ನಾಯಕನಿಗೆ ಇಂತಹ ಸ್ಥಿತಿ ಬರಬಾರದಿತ್ತು, ಒಂದು ವೇಳೆ ನಾವು ಒಟ್ಟಾಗಿದ್ದರೆ ಅವರು ಈ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿರಲಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಿತೀಶ್ ಕುಮಾರ್ ಆರೋಗ್ಯ ಚೆನ್ನಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net