ದಳಪತಿ ಬಿಟ್ಟರೆ ನೀವೇ... ತಮಿಳು ನಟ ಧನುಷ್​ ರಾಜಕೀಯ ಎಂಟ್ರಿ ಪಕ್ಕಾ ಅನ್ನೋ ಚರ್ಚೆ ಹುಟ್ಟುಹಾಕಿದ ಕಿಚ್ಚಿನ ಭಾಷಣ

ಸಿಎಂ ವಿಜಯ್​ (ಎಡ), ನಟ ಧನುಷ್​ (ಬಲ)
ಸಿಎಂ ವಿಜಯ್​ (ಎಡ), ನಟ ಧನುಷ್​ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ನಟ ಧನುಷ್​ ರಾಜಕೀಯ ಎಂಟ್ರಿ ಬಗ್ಗೆ ಜೋರಾದ ಫ್ಯಾನ್ಸ್ ಮಾತು
  • ಸಿಎಂ ವಿಜಯ್ ನಂತರ ತಮಿಳು ರಾಜಕೀಯಕ್ಕೆ ಧನುಷ್​ ಎಂಟ್ರಿ
  • ಇದು ಪಕ್ಕಾ ಎನ್ನಲು ಫ್ಯಾನ್ಸ್​ಗೆ ನಟನ ಕಿಚ್ಚಿನ ಭಾಷಣವೇ ಕಾರಣ
ಚೆನ್ನೈ: 'ರಾಯನ್' ಚಿತ್ರದ ಖ್ಯಾತಿಯ ತಮಿಳು ನಟ ಧನುಷ್ ಶೀಘ್ರದಲ್ಲೇ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಎಂಬ ಮಾತುಗಳು ಸದ್ಯ ಕಾಲಿವುಡ್​ ಅಂಗಳದಲ್ಲಿ ಜೋರಾಗಿ ಸದ್ದು ಮಾಡಲಾರಂಭಿಸಿದೆ. ದಳಪತಿ ವಿಜಯ್ ಬಿಟ್ಟರೆ ಚಿತ್ರೋದ್ಯಮದಿಂದ ಬರಲಿರುವ ಮತ್ತೊಬ್ಬ ರಾಜಕಾರಣಿ ನೀವೇ ಎಂದು ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಲ್ಲಿ ಅಭಿಪ್ರಾಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. 
ಕಳೆದ ಕೆಲವು ವಾರಗಳಿಂದ ಕಾಲಿವುಡ್ ಹಾಗೂ ತಮಿಳುನಾಡು ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿರುವ ಈ ವದಂತಿಗೆ ಧನುಷ್ ಅವರ ಇತ್ತೀಚಿನ ಭಾಷಣ ಮತ್ತಷ್ಟು ಪುಷ್ಠಿ ನೀಡಿದೆ. ಇತ್ತೀಚೆಗೆ ನಟನ ಅಭಿಮಾನಿಗಳ ಸಂಘ ಪ್ರತ್ಯೇಕ ಧ್ವಜವೊಂದನ್ನು ಅನಾವರಣಗೊಳಿಸಿದ್ದಲ್ಲದೇ, ಧನುಷ್​ ಪರ ಬ್ಯಾಟ್​ ಬೀಸಿತು. ಅದಕ್ಕೆ ತಕ್ಕಂತೆಯೇ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ 'ಕುಬೇರನ್​' ಆಡಿರುವ ಮಾತುಗಳು ಸದ್ಯ ಅವರ ರಾಜಕೀಯ ಎಂಟ್ರಿ ಬಹುತೇಕ ಖಚಿತ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಧನುಷ್​ ಹೇಳಿದ್ದೇನು?

"ಇಷ್ಟೊಂದು ಸಂಖ್ಯೆಯಲ್ಲಿ ಜನ ಒಂದೇ ಕಡೆ ಸೇರಿದ್ದೀರಾ. ಈ ರೀತಿಯ ಒಗ್ಗಟ್ಟಿನಲ್ಲಿ ದೊಡ್ಡ ಶಕ್ತಿ ಅಡಗಿದೆ. ಆ ಒಗ್ಗಟ್ಟಿಗೆ ನಾವೊಂದು ಅರ್ಥಪೂರ್ಣ ಉದ್ದೇಶವನ್ನು ಕೊಡಬೇಕಿದೆ. ಕೇವಲ ಸಿನಿಮಾಗಳ ಆಡಿಯೋ ಲಾಂಚ್ ಹಾಗೂ ಫ್ಯಾನ್ಸ್‌ ಭೇಟಿಗೆ ಮಾತ್ರ ಇದು ಸೀಮಿತ ಆಗಬಾರದು. ನಿಮ್ಮ ವ್ಯಾಪ್ತಿಯಲ್ಲಿರುವ ಜನರ, ನಿಮ್ಮ ಸುತ್ತಮುತ್ತಲಿನ ಕುಟುಂಬಗಳ ಕಷ್ಟ-ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರಿಗೆ ಸಾಧ್ಯವಾದಷ್ಟು ನೆರವಾಗಿ. ನಿಮ್ಮನ್ನು ನೋಡಿ ನಾನು ಇನ್ನೂ ಖುಷಿ, ಹೆಮ್ಮೆ ಪಡುವಂತೆ ಮಾಡಿ. ನೀವೆಲ್ಲರೂ ಇದನ್ನು ಮಾಡುತ್ತೀರಾ ಎಂಬ ನಂಬಿಕೆ ನನಗಿದೆ" ಎಂದಿದ್ದಾರೆ. 

ವಿಜಯ್‌ಗೆ ಸಾಧ್ಯ ಅಂದಮೇಲೆ ಧನುಷ್‌ಗೆ ಏಕಿಲ್ಲ?

ಧನುಷ್ ಅವರ ಈ ಮಾತುಗಳ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ 'ಎಕ್ಸ್' (ಟ್ವಿಟರ್) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಟನ ಅಭಿಮಾನಿಗಳು ಅವರ ರಾಜಕೀಯ ಪ್ರವೇಶವನ್ನು ಬಹಿರಂಗವಾಗಿಯೇ ಚರ್ಚಿಸಲು ಶುರು ಮಾಡಿದ್ದಾರೆ. ತಮಿಳುನಾಡಿನ ಸಿಎಂ ಆಗಿರುವ ವಿಜಯ್ ಅವರಿಗೆ ಸಾಧ್ಯವಾಗಿದೆ ಎಂದಮೇಲೆ ಧನುಷ್​ಗೆ ಯಾಕೆ ಆಗೋದಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಮತ್ತೊಬ್ಬ ಬಳಕೆದಾರರು, ರಾಜಕೀಯಕ್ಕೆ ಸ್ವಾಗತ ಧನುಷ್ ಸರ್​. ತಮಿಳುನಾಡಿಗೆ ಕೇವಲ ಅಧಿಕಾರಕ್ಕಾಗಿ ಬರುವ ನಟರಲ್ಲ, ಶಿಕ್ಷಣ, ಶಿಸ್ತು ಮತ್ತು ಧೈರ್ಯವಿರುವ ಧ್ವನಿಯ ಅಗತ್ಯವಿದೆ" ಎಂದು ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬರು, "ಧನುಷ್ ಅವರು ನಮ್ಮ ನಿರೀಕ್ಷೆಗಿಂತಲೂ ಬೇಗನೇ ಹೊಸ ಪಕ್ಷವನ್ನು ಘೋಷಿಸುವ ಲಕ್ಷಣಗಳು ಕಾಣಿಸುತ್ತಿವೆ" ಎಂದು ಬರೆದುಕೊಂಡಿದ್ದಾರೆ.
ನಟ ವಿಜಯ್ ಅವರು ಟಿವಿಕೆ ಪಕ್ಷ ಘೋಷಿಸುವ ಮುನ್ನ ತಮ್ಮ 'ವಿಜಯ್ ಮಕ್ಕಳ್ ಇಯಕ್ಕಮ್' ಮೂಲಕ ವರ್ಷಗಳ ಕಾಲ ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದರು. ಇದೀಗ ಧನುಷ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ತಮ್ಮ ದೊಡ್ಡ ಅಭಿಮಾನಿಗಳ ಬಳಗದ ಮೂಲಕ ಜನಾಂದೋಲನ ರೂಪಿಸುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net