ಕೇರಳದಲ್ಲಿ ಬೆಚ್ಚಿಬೀಳಿಸುವ ಅಪಘಾತ; ವ್ಯಾನ್‌ನಲ್ಲಿದ್ದ ರಾಡ್‌ ಚುಚ್ಚಿ ಸವಾರ ಸಾವು | Biker killed in Kerala

ಪಿಕಪ್ ವ್ಯಾನ್‌ನಿಂದ ರಾಡ್‌ಗಳು ಜಾರಿ ಬೈಕ್ ಸವಾರ ಸಾವು
ಪಿಕಪ್ ವ್ಯಾನ್‌ನಿಂದ ರಾಡ್‌ಗಳು ಜಾರಿ ಬೈಕ್ ಸವಾರ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಪಿಕಪ್ ವ್ಯಾನ್‌ನಿಂದ ರಾಡ್‌ಗಳು ಜಾರಿ ಬೈಕ್ ಸವಾರ ಬಲಿ
  • ಆಟೋ ಏಕಾಏಕಿ ಯೂ-ಟರ್ನ್ ತೆಗೆದುಕೊಂಡಿದ್ದರಿಂದ ಅವಘಡ
  • ಕೇರಳದ ತ್ರಿಶೂರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತ
ಕೇರಳ: ಒಂದು ಸಣ್ಣ ಅಜಾಗರೂಕತೆಗೆ ಅಮಾಯಕ ಜೀವಗಳು ಬಲಿಯಾಗುತ್ತವೆ ಎನ್ನುವುದಕ್ಕೆ ಈ ಭೀಕರ ಅವಘಡವೇ ಸಾಕ್ಷಿ. ಹೌದು.. ಚಲಿಸುತ್ತಿದ್ದ ಪಿಕಪ್ ವ್ಯಾನ್‌ನಿಂದ ಕಬ್ಬಿಣದ ರಾಡ್‌ಗಳು ಜಾರಿ ಬಿದ್ದು ಬೈಕ್ ಸವಾರನ ದೇಹಕ್ಕೆ ಚುಚ್ಚಿ ಆತ ಮೃತಪಟ್ಟಿರುವ ಭೀಕರ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ವೈರಲ್​ ಆಗಿವೆ.
ಕುಟ್ಟನೆಲ್ಲೂರ್‌ನ ಹೈಲೈಟ್ ಮಾಲ್ ಬಳಿ ಈ ಅಪಘಾತ ನಡೆದಿದ್ದು, ಬೈಕ್ ಸವಾರ ಶೆರಿನ್ ಜಾನ್ ಮೃತಪಟ್ಟಿದ್ದಾನೆ. ರಸ್ತೆಯ ಮಧ್ಯದಲ್ಲೇ ಆಟೋವೊಂದು ಏಕಾಏಕಿ ಯೂ-ಟರ್ನ್ ತೆಗೆದುಕೊಂಡಿದೆ. ಆಟೋದ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಶೆರಿನ್ ಕೂಡ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಅವರ ಹಿಂದೆ ಕಬ್ಬಿಣದ ರಾಡ್‌ಗಳನ್ನು ತುಂಬಿಕೊಂಡು ಪಿಕಪ್ ವ್ಯಾನ್ ಕೂಡ ಬರುತ್ತಿತ್ತು. ಬೈಕ್ ಮತ್ತು ವ್ಯಾನ್ ಎರಡೂ ಏಕಾಏಕಿ ನಿಂತಾಗ ದುರಂತ ನಡೆದಿದೆ.

ಸಡಿಲವಾಗಿ ಕಟ್ಟಿದ್ದ ರಾಡ್‌ಗಳು


ಇತ್ತ, ಪಿಕಪ್ ವ್ಯಾನ್‌ನಲ್ಲಿ ಕಬ್ಬಿಣದ ರಾಡ್‌ಗಳನ್ನು ಸರಿಯಾಗಿ ಕಟ್ಟಿರಲಿಲ್ಲ ಎನ್ನಲಾಗಿದೆ. ವ್ಯಾನ್ ಏಕಾಏಕಿ ನಿಂತಾಗ ರಾಡ್‌ಗಳು ಮುಂದೆ ಜಾರಿ ಶೆರಿನ್ ದೇಹಕ್ಕೆ ಚುಚ್ಚಿವೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಓಡಿ ಬಂದು ರಾಡ್‌ಗಳನ್ನು ತೆಗೆದು ಶೆರಿನ್ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರವಾಗಿ ಗಾಯಗೊಂಡಿದ್ದ ಸವಾತ ಅಸುನೀಗಿದ್ದಾರೆ.

ವ್ಯಾನ್ ವಶಕ್ಕೆ ಪಡೆದ ಖಾಕಿ

ಇನ್ನು, ಪೊಲೀಸರು ಪಿಕಪ್ ವ್ಯಾನ್‌ನ್ನು ವಶಕ್ಕೆ ಪಡೆದಿದ್ದು, ಶೆರಿನ್ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನಗಳಲ್ಲಿ ಕಬ್ಬಿಣದ ರಾಡ್‌, ಪೈಪ್ ಸೇರಿದಂತೆ ಉದ್ದನೆಯ ವಸ್ತುಗಳನ್ನು ಸಾಗಿಸುವಾಗ ಅವುಗಳನ್ನು ಸರಿಯಾಗಿ ಕಟ್ಟದೇ ಇದ್ದರೆ ಎಷ್ಟು ದೊಡ್ಡ ಅಪಾಯವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ,(ಏಜೆನ್ಸೀಸ್​).


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net