ಸಿಕ್ಕಿಂ ಜನ ಪ್ರಕೃತಿಯ ಬ್ರ್ಯಾಂಡ್ ಅಂಬಾಸಿಡರ್ಸ್​​.. ಈಶಾನ್ಯದ ಅಷ್ಟಲಕ್ಷ್ಮಿಯರ ಅಭಿವೃದ್ಧಿಯೇ ನಮ್ಮ ಗುರಿ ಎಂದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಂನ 50ನೇ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ರಾಜ್ಯದ ಅಭಿವೃದ್ಧಿ ಮತ್ತು ದೇಶದ ಏಕತೆಯ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ. ಧರ್ಮ ಮತ್ತು ರಾಜಕೀಯದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ, ಸಿಕ್ಕಿಂ ರಾಜ್ಯವು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ದೃಷ್ಟಿಕೋನವನ್ನು ನೈಜವಾಗಿ ಪ್ರತಿಬಿಂಬಿಸುತ್ತಿದೆ ಎಂದು ಶ್ಲಾಘಿಸಿದರು.
ಗ್ಯಾಂಗ್ಟಾಕ್‌ನಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿಯವರು 4,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ತಮ್ಮ ಭಾಷಣದುದ್ದಕ್ಕೂ ಸಿಕ್ಕಿಂನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಜನರ ದೇಶಭಕ್ತಿಯನ್ನು ಕೊಂಡಾಡಿದ ಮೋದಿ, ಇಲ್ಲಿನ ಜನರು ಇಡೀ ಹಿಂದೂಸ್ತಾನವನ್ನು ಕಣ್ಣಮುಂದೆ ತರುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಹೊಸ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲು ಇಂತಹ ಭಾವನೆಗಳು ಅಗತ್ಯವೆಂದು ಅವರು ಪ್ರತಿಪಾದಿಸಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆ ಪಕ್ಷವು ಸಿಕ್ಕಿಂನ ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷಿಸಿ ಮೂಲೆಗುಂಪು ಮಾಡಿತ್ತು, ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ರೈಲ್ವೆ ಸಂಪರ್ಕವು ಸಿಕ್ಕಿಂ ರಾಜ್ಯವನ್ನು ತಲುಪಲಿದೆ ಎಂಬ ಆಶಾದಾಯಕ ವಿಷಯವನ್ನು ಹಂಚಿಕೊಂಡರು.
ಈಶಾನ್ಯ ರಾಜ್ಯಗಳನ್ನು ಭಾರತದ ಅಷ್ಟಲಕ್ಷ್ಮಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ತಮ್ಮ ಸರ್ಕಾರವು ಆಕ್ಟ್ ಈಸ್ಟ್​​, ಆಕ್ಟ್​ ಫಾಸ್ಟ್ ಎಂಬ ದೃಢನಿಶ್ಚಯದೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ವಿಶೇಷವಾಗಿ ಸಿಕ್ಕಿಂನ ರಸ್ತೆಗಳ ಸ್ವಚ್ಛತೆ ಮತ್ತು ಅಲ್ಲಿನ ಪರಿಸರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿನ ಜನರು ಪ್ರಕೃತಿಯ ನಿಜವಾದ ರಕ್ಷಕರು ಮತ್ತು ರಾಯಭಾರಿಗಳು ಎಂದು ಕರೆದರು.
ಸಿಕ್ಕಿಂ ರಾಜ್ಯವನ್ನು ಪೂರ್ವದ ಸ್ವರ್ಗ ಮತ್ತು ಆರ್ಕಿಡ್‌ಗಳ ಉದ್ಯಾನ ಎಂದು ವರ್ಣಿಸಿದ ಪ್ರಧಾನಿ, ಪ್ರಕೃತಿ ಪ್ರೇಮಿಗಳು ಇಲ್ಲಿನ ಸೌಂದರ್ಯ ಮತ್ತು ಆಧ್ಯಾತ್ಮಿಕ ಆನಂದವನ್ನು ಅನುಭವಿಸಲು ಭೇಟಿ ನೀಡಬೇಕೆಂದು ಮನವಿ ಮಾಡಿದರು. ಪ್ರಧಾನಿಯವರು ಅನಾವರಣಗೊಳಿಸಿದ 4,000 ಕೋಟಿ ರೂಪಾಯಿಗಳ ಯೋಜನೆಗಳು ಮೂಲಸೌಕರ್ಯ, ಸಂಪರ್ಕ, ಆರೋಗ್ಯ, ಶಿಕ್ಷಣ, ವಿದ್ಯುತ್, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಕೃಷಿಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದ್ದು, ಇವು ರಾಜ್ಯದ ಸಮಗ್ರ ಪ್ರಗತಿಗೆ ಹೊಸ ವೇಗ ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net