2011ರಲ್ಲಿ ಕೇವಲ 2,748 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು, 2016ರಲ್ಲಿ ಈ ಸಂಖ್ಯೆ 3,776ಕ್ಕೆ ಹಾಗೂ 2021ರಲ್ಲಿ 3,998ಕ್ಕೆ ಏರಿಕೆಯಾಗಿತ್ತು. ಆದರೆ ಈ ಬಾರಿ 4,600ರ ಗಡಿ ದಾಟಿರುವುದು ರಾಜಕೀಯ ಜಾಗೃತಿ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಸಂಘಟಿತ ಸ್ವರೂಪವನ್ನು ತೋರಿಸುತ್ತದೆ. ಈ ಏರಿಕೆಗೆ ಪ್ರಮುಖ ಕಾರಣವೆಂದರೆ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳ ಹೊರತಾಗಿ ಹೊಸ ಶಕ್ತಿಗಳ ಉದಯ. ವಿಶೇಷವಾಗಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಚುನಾವಣಾ ಪ್ರವೇಶವು ಯುವ ಮತದಾರರಲ್ಲಿ ಮತ್ತು ತಟಸ್ಥ ಮತದಾರರಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇದರೊಂದಿಗೆ ಶಶಿಕಲಾ ಮತ್ತು ಡಾ. ರಾಮದಾಸ್ರ ಪಿಎಂಕೆ ಬಣಗಳ ಭಾಗವಹಿಸುವಿಕೆ ಚುನಾವಣಾ ಕಣವನ್ನು ಮತ್ತಷ್ಟು ರಂಗುಗೊಳಿಸಿದೆ.