ಪಶ್ಚಿಮ ಬಂಗಾಳದಲ್ಲೂ ಯುಸಿಸಿ ಜಾರಿಗೆ ಸಿದ್ದತೆ: ಸೂಕ್ತ ರೀತಿಯಲ್ಲಿ ಅನುಷ್ಠಾನ ಮಾಡ್ತೇವೆ: ಸಿಎಂ ಸುವೇಂದು ಅಧಿಕಾರಿ | CM Suvendu Adhikari

ಸಿಎಂ ಸುವೇಂದು ಅಧಿಕಾರಿ
ಸಿಎಂ ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಪಂಚರಾಜ್ಯ ಚುನಾವಣೆ ಬಳಿಕ ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಅಂಗೀಕರಿಸಲಾಗಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ಪಶ್ಚಿಮ ಬಂಗಾಳದಲ್ಲೂ ಸೂಕ್ತ ರೀತಿಯಲ್ಲಿ ಯುಸಿಸಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಸುವೇಂದು ಅಧಿಕಾರಿ(CM Suvendu Adhikari) ಹೇಳಿದ್ದಾರೆ.
ಶುಕ್ರವಾರ(ಜೂ. 26) ಸಾಹಿತ್ಯ ಲೋಕದ ದಿಗ್ಗಜ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ 189ನೇ ಜನ್ಮದಿನಾಚರಣೆಯ ಕಾರ್ಯಕ್ರಮದ ವೇಳೆ ಮಾತನಾಡಿರುವ ಅವರು, ಬಂಗಾಳವು ಯುಸಿಸಿಯನ್ನು ಜಾರಿಗೆ ತರಲು ನಿಗದಿತ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಎಂದು ತಿಳಿಸಿದ್ದಾರೆ.
ಯುಸಿಸಿ ಅನುಷ್ಠಾನಕ್ಕೆ ಒಂದು ಕಾರ್ಯವಿಧಾನವಿದೆ, ಮತ್ತು ಇತರ ರಾಜ್ಯಗಳಂತೆ, ಬಂಗಾಳ ಕೂಡ ಈ ಕಾರ್ಯವಿಧಾನವನ್ನು ಪಾಲಿಸುತ್ತದೆ. ಉತ್ತರಾಖಂಡ, ಗುಜರಾತ್, ಅಸ್ಸಾಂ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳು ಈಗಾಗಲೇ ಯುಸಿಸಿ ಪ್ರಸ್ತಾಪಗಳನ್ನು ಜಾರಿಗೆ ತಂದಿವೆ. ಈಗ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ ಬಂಗಾಳ ಕೂಡ ಅದನ್ನು ಜಾರಿಗೆ ತರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಯುಸಿಸಿ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದಂತಹ ವಿಷಯಗಳನ್ನು ಒಳಗೊಳ್ಳುತ್ತದೆ. ಜೂನ್ 29ರಂದು ನಡೆಯುತ್ತಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net