ರಾಮನ ಊರಲ್ಲಿ ಮೀನಿನ ವಾಸನೆ; ಕಾಂಗ್ರೆಸ್-ಬಿಜೆಪಿ ರಾಜಕೀಯ ಜಟಾಪಟಿ | Fish feast in Ayodhya

ಅಯೋಧ್ಯೆಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೀನು ಊಟದ ವಿವಾದ
ಅಯೋಧ್ಯೆಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೀನು ಊಟದ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೀನು ಊಟದ ವಿವಾದ
  • ಅಯೋಧ್ಯೆಯಲ್ಲಿ ಮೀನು ಊಟ ಮಾಡಿಸಿದ್ದು ಸರಿಯಲ್ಲ ಎಂದ ಬಿಜೆಪಿ
  • ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕೆಗೆ ಕಾಂಗ್ರೆಸ್ ತಿರುಗೇಟು
Ayodhya Fish Controversy: ಅಯೋಧ್ಯೆಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಒಂದು ಊಟದ ಕಾರ್ಯಕ್ರಮ ಈಗ ರಾಜಕೀಯ ಕಿಚ್ಚಿಗೆ ಕಾರಣವಾಗಿದೆ. ಕಾಂಗ್ರೆಸ್ ಉತ್ತರ ಪ್ರದೇಶ ಅಧ್ಯಕ್ಷ ಅಜಯ್ ರೈ ಸ್ವಾಗತ ಸಮಾರಂಭದಲ್ಲಿ ಮೀನು ಊಟ ನೀಡಿದ್ದರು ಎನ್ನುವ ವಿಚಾರಕ್ಕೆ ಬಿಜೆಪಿಗರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ರಾಮಮಂದಿರ ಇರುವ ಅಯೋಧ್ಯೆಯಲ್ಲಿ, ಅದರಲ್ಲೂ ಶ್ರಾವಣ ಮಾಸದ ಸಂದರ್ಭದಲ್ಲಿ ಮೀನು ಊಟ ಆಯೋಜಿಸಿರುವುದು ಹಿಂದೂಗಳ ಭಾವನೆಗೆ ಧಕ್ಕೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹನುಮಾನ್ ಗಢಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮೀನು ಊಟ ಮಾಡಿದ್ದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ತೋರಿಸುತ್ತೆ ಅಂತ  ಟೀಕಿಸಿದ್ದಾರೆ.

ಆದಿತ್ಯನಾಥ್​ಗೆ ಕಾಂಗ್ರೆಸ್ ತಿರುಗೇಟು

ಇತ್ತ, ಕಾಂಗ್ರೆಸ್ ಕೂಡ ಸುಮ್ಮನಾಗಿಲ್ಲ. ಕಾಂಗ್ರೆಸ್ ಸಂಸದ ಪವನ್ ಖೇರಾ, ಅಜಯ್ ರೈ ಸಸ್ಯಾಹಾರಿ. ಬಿಜೆಪಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವಿಚಾರವನ್ನು ದೊಡ್ಡದು ಮಾಡುತ್ತಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ರಾಮಮಂದಿರದ ದೇಣಿಗೆ ಕಳವು ಕೇಸ್​ಗಳ ಗಂಭೀರ ವಿಚಾರಗಳನ್ನು ಮರೆಮಾಚಲು ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರಿಗೆ ಅಜಯ್ ರೈ ಸವಾಲು 

ಇನ್ನು,  ಅಜಯ್ ರೈ ಕೂಡ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ತಾವು ಮೀನು ತಿನ್ನುತ್ತಿರುವ ಒಂದೇ ಒಂದು ಸಾಕ್ಷಿ ತೋರಿಸಿದರೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಆದರೆ ಕಾರ್ಯಕ್ರಮದ ಜಾಗದಲ್ಲಿ ಮೀನು ತೊಳೆಯುವುದು, ಕತ್ತರಿಸುವುದು, ಅಡುಗೆ ಮಾಡುವ ದೃಶ್ಯಗಳು ಕಂಡುಬಂದಿವೆ. ಈ ವಿಚಾರ ಸ್ಥಳೀಯರಲ್ಲೂ ಅಸಮಾಧಾನ ಮೂಡಿಸಿದ್ದು, ಕೆಲವರು ಪ್ರತಿಭಟನೆ ನಡೆಸಿದ್ದಾರೆ.

ಆಹಾರ ತಿನ್ನುವುದು ನಮ್ಮ ಹಕ್ಕು

ಕಾರ್ಯಕ್ರಮ ಆಯೋಜಿಸಿದ್ದ ಕಾಂಗ್ರೆಸ್ ನಾಯಕ ರಾಮ್ ನಿಹಾಲ್ ನಿಶಾದ್, ಮೀನು ತಿನ್ನುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಆಹಾರ ತಿನ್ನುವ ಹಕ್ಕಿದೆ. ತಮ್ಮ ಸಮುದಾಯದಲ್ಲಿ ಮೀನುಗಾರಿಕೆ ಮತ್ತು ಮೀನು ಸೇವನೆ ಸಾಂಪ್ರದಾಯಿಕ ಪದ್ಧತಿ ಎಂದೂ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ, ಅಯೋಧ್ಯೆಯಲ್ಲಿನ ಒಂದು ಊಟದ ವಿಚಾರ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಗಳ ಕದನವಾಗಿ ಮಾರ್ಪಟ್ಟಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net