ಸದನದಲ್ಲಿ 'ನರವಾಣೆ' ಬಾಂಬ್ ಸಿಡಿಸಿದ Rahul Gandhi : ಚೀನಾ ಗಡಿ ವಿವಾದಕ್ಕೆ ಕಿಚ್ಚು ಹಚ್ಚಿದ ಪ್ರಕಟವಾಗದ ಪುಸ್ತಕ!

Rahul Gandhi
Rahul Gandhi
Published on
ನವದೆಹಲಿ: ಸಂಸತ್ತಿನ ಅಧಿವೇಶನದಲ್ಲಿ ಇಂದು 'ಚೀನಾ-ಭಾರತ' ಗಡಿ ವಿವಾದದ ಕಿಚ್ಚು ಜೋರಾಗಿ ಹತ್ತಿಕೊಂಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಪ್ರಕಟವಾಗದ ಪುಸ್ತಕದ ಲೇಖನವೊಂದನ್ನು ಉಲ್ಲೇಖಿಸಲು ಮುಂದಾದಾಗ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಸಮರವೇ ನಡೆಯಿತು. ಗದ್ದಲ ತಾರಕಕ್ಕೇರಿದ ಕಾರಣ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಬೇಕಾಯಿತು.

ನರವಾಣೆ ಪುಸ್ತಕದ ಸುತ್ತ ವಿವಾದದ ಸುಳಿ!

ಸದನದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, 2020ರ ಲಡಾಖ್ ಗಡಿ ಸಂಘರ್ಷದ ಕುರಿತಾದ ಜನರಲ್ ಎಂ.ಎಂ. ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' (Four Stars Of Destiny) ಎಂಬ ಇನ್ನೂ ಪ್ರಕಟವಾಗದ ಆತ್ಮಚರಿತ್ರೆಯ ಲೇಖನವೊಂದನ್ನು ಎತ್ತಿ ತೋರಿಸಿದರು. ಈ ಪುಸ್ತಕದಲ್ಲಿ ಗಲ್ವಾನ್ ಸಂಘರ್ಷದ ಬಗ್ಗೆ ಸ್ಫೋಟಕ ಮಾಹಿತಿ ಇದೆ ಎಂದು ರಾಹುಲ್ ವಾದಿಸಲು ಮುಂದಾದರು.

ಬಿಜೆಪಿ ಘಟಾನುಘಟಿಗಳ ಪ್ರತಿರೋಧ

ರಾಹುಲ್ ಗಾಂಧಿ ಪುಸ್ತಕದ ಸಾಲುಗಳನ್ನು ಓದುತ್ತಿದ್ದಂತೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ಇನ್ನೂ ಪ್ರಕಟವೇ ಆಗದ ಪುಸ್ತಕದ ಸಾಲುಗಳನ್ನು ಸದನದಲ್ಲಿ ಉಲ್ಲೇಖಿಸುವುದು ನಿಯಮಗಳಿಗೆ ಬಾಹಿರ. ಆ ಪುಸ್ತಕವನ್ನು ಮೊದಲು ಸದನದ ಮುಂದಿಡಿ," ಎಂದು ಸವಾಲು ಹಾಕಿದರು. ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ರಾಹುಲ್ ವಿರುದ್ಧ ಮುಗಿಬಿದ್ದರು
"ಪ್ರಕಟವಾಗದ ಪುಸ್ತಕದ ಸತ್ಯಾಸತ್ಯತೆ ಏನು? ಸುಳ್ಳು ಮಾಹಿತಿಯನ್ನು ಬಿತ್ತರಿಸಲು ಸದನವನ್ನು ಬಳಸಿಕೊಳ್ಳಬೇಡಿ." ಎಂದು ಸಚಿವ ಅಮಿತ್ ಶಾ ಎಂದರು. ಇನ್ನು "ಸ್ಪೀಕರ್ ಆದೇಶವನ್ನು ಪಾಲಿಸದ ಸದಸ್ಯರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸೋಣ. ರಾಹುಲ್ ಗಾಂಧಿ ಸಂಸತ್ತನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ." ಎಂದು ಕಿರಣ್​ ರಿಜಿಜು ಕಿಡಿಕಾರಿದರು.

ರಾಹುಲ್ ತಿರುಗೇಟು

"ಬಿಜೆಪಿ ನಾಯಕರ ಅಡೆತಡೆಗಳಿಂದ ಸಿಟ್ಟಾದ ರಾಹುಲ್ ಗಾಂಧಿ, "ಈ ಲೇಖನದಲ್ಲಿ ಏನಿದೆ ಎಂದು ನಿಮಗೆ ಇಷ್ಟೊಂದು ಭಯವಾಗುತ್ತಿದೆ? ನಾನು ಹೇಳುತ್ತಿರುವುದು 100% ಸತ್ಯ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ನನ್ನ ದೇಶಪ್ರೇಮವನ್ನು ಪ್ರಶ್ನಿಸಿದ್ದಕ್ಕೆ ನಾನು ಇಂದು ಈ ವಿಷಯ ಪ್ರಸ್ತಾಪಿಸುತ್ತಿದ್ದೇನೆ," ಎಂದು ಗುಡುಗಿದರು. ರಾಹುಲ್ ಅವರು 'ಚೀನಾದ ಟ್ಯಾಂಕ್‌ಗಳು' ಎಂಬ ಪದವನ್ನು ಬಳಸಿದಾಗ ಇಡೀ ಆಡಳಿತ ಪಕ್ಷ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿತು.

ಅಖಿಲೇಶ್ ಯಾದವ್ ಬೆಂಬಲ

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಹುಲ್ ಬೆನ್ನಿಗೆ ನಿಂತರು. "ಚೀನಾ ವಿಚಾರ ಅತ್ಯಂತ ಸೂಕ್ಷ್ಮವಾದುದು. ದೇಶದ ಭದ್ರತೆಯ ಬಗ್ಗೆ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು," ಎಂದು ಒತ್ತಾಯಿಸಿದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net