ಪುದುಚೇರಿ ಚುನಾವಣೆ; ಅಧಿಕಾರಕ್ಕೆ ಬಂದ್ರೆ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನದ ಭರವಸೆ ನೀಡಿದ ರಾಹುಲ್ ಗಾಂಧಿ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ಲಾಸ್ಪೆಟ್‌: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಸೋಮವಾರ(ಏ. 06) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಭರವಸೆ ನೀಡಿದ್ದಾರೆ.
ಲಾಸ್ಪೆಟ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಪುದುಚೇರಿಗೆ ಪೂರ್ಣ ರಾಜ್ಯ ಸ್ಥಾನಮಾನ ನೀಡಲು ನಾವು ಬದ್ಧರಾಗಿದ್ದೇವೆ. ಪ್ರಸ್ತುತ ಕೇಂದ್ರಾಡಳಿತ ಪ್ರದೇಶ ಸರ್ಕಾರವು ಜನರ ಇಚ್ಛೆಯನ್ನು ಪ್ರತಿಬಿಂಬಿಸುವುದಿಲ್ಲ, ಬದಲಾಗಿ ದೆಹಲಿಯಿಂದ ಸರ್ಕಾರ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರಾದೇಶಿಕ ನಾಯಕರನ್ನು ಬದಿಗಿಟ್ಟು ರಿಮೋಟ್ ಕಂಟ್ರೋಲ್ ಮೂಲಕ ಕೇಂದ್ರಾಡಳಿತ ಪ್ರದೇಶವನ್ನು ನಡೆಸುತ್ತಿದೆ. ರಾಜ್ಯದಲ್ಲಿ ನಡೆಯುವ ಎಲ್ಲಾ ಒಪ್ಪಂದಗಳ ಮೇಲೆ ಶೇ. 30ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇಲ್ಲಿನ ಸರ್ಕಾರ ಸಂಗ್ರಹಣಾ ಏಜೆಂಟ್ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಜನರ ಧ್ವನಿಯನ್ನು ನಿಜವಾಗಿಯೂ ಪ್ರತಿನಿಧಿಸುವ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ನಾನು ಬಂದಾಗಲೆಲ್ಲಾ, ಎಲ್ಲಿಗೆ ಹೋದರೂ ನೀವು ನನಗೆ ಅಪಾರ ಪ್ರೀತಿಯನ್ನು ತೋರಿಸುತ್ತೀರಿ ಎಂದು ಪುದುಚೇರಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ 30,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ, ನಿರುದ್ಯೋಗಿ ಯುವಕರಿಗೆ ಮಾಸಿಕ 2,000 ರೂ. ಭತ್ಯ ನೀಡಲಿದ್ದೇವೆ. ಹಾಗೆಯೇ ಪುದುಚೇರಿಯ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಸರ್ಕಾರಿ ಉದ್ಯೋಗಕ್ಕೆ 40 ವರ್ಷ ವಯಸ್ಸಿನವರೆಗೆ ಪ್ರವೇಶಾತಿ ಸಡಿಲಿಕೆ ಮಾಡ್ತೇವೆ. ಪುದುಚೇರಿಯ ಪ್ರತಿ ಕುಟುಂಬಕ್ಕೂ 20 ಲಕ್ಷ ರೂ.ಗಳ ಆರೋಗ್ಯ ವಿಮೆ ಲಭ್ಯ ಜಾರಿಗೊಳಿಸುತ್ತೇವೆ ಎಂದಿದ್ದಾರೆ.
30 ಸ್ಥಾನಗಳನ್ನು ಒಳಗೊಂಡಿರುವ ಪುದುಚೇರಿ ವಿಧಾನಸಭೆಗೆ ಏಪ್ರಿಲ್ 09ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ. 04ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net