ಉದಾತ್ತ ಪ್ರಯತ್ನವನ್ನು ಹಳಿತಪ್ಪಿಸಿದ್ದು ಡಿಎಂಕೆ-ಕಾಂಗ್ರೆಸ್; ಜನರ ಮುಂದೆ ತಮ್ಮ ಮನದ ನೋವು ಹಂಚಿಕೊಂಡ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಚೆನ್ನೈ: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದು, ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಕ್ಷುಲ್ಲಕ ರಾಜಕೀಯಕ್ಕಾಗಿ ಒಂದು ಉದಾತ್ತ ಪ್ರಯತ್ನವನ್ನು ಹಳಿತಪ್ಪಿಸಿವೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ವಿಷಯದಲ್ಲಿ ತಮಗಿರುವ ತೀವ್ರ ನೋವು ಮತ್ತು ಕೋಪವನ್ನು ಜನರ ಮುಂದೆ ವ್ಯಕ್ತಪಡಿಸಿದರು.

ನನ್ನ ಜನರ ಮುಂದೆ ನೋವು- ಕೋಪವನ್ನು ವ್ಯಕ್ತಪಡಿಸುತ್ತೇನೆ ಎಂದ ಪ್ರಧಾನಿ

ಇಂದು ನನ್ನ ಜನರ ಮುಂದೆ ನನ್ನ ನೋವು ಮತ್ತು ಕೋಪವನ್ನು ಹಂಚಿಕೊಳ್ಳಲು ಬಯಸುತ್ತೇನೆ. 2023 ರಲ್ಲಿ ನಾವು ನಾರಿ ಶಕ್ತಿ ವಂದನ ಅಧಿನಿಯಮವನ್ನು ಅಂಗೀಕರಿಸಿದ್ದೆವು. ಈ ತಿಂಗಳ 16 ರಂದು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಾವು ಐತಿಹಾಸಿಕ ಹೆಜ್ಜೆ ಇಟ್ಟಿದ್ದೆವು. ಈ ಮಸೂದೆಯನ್ನು ಬೆಂಬಲಿಸುವಂತೆ ನಾನು ವೈಯಕ್ತಿಕವಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದೆ.
ಈ ಕಾರ್ಯದ ಸಂಪೂರ್ಣ ಶ್ರೇಯಸ್ಸು ವಿಪಕ್ಷಗಳೇ ತೆಗೆದುಕೊಳ್ಳಲಿ, ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಸಾಮಾನ್ಯ ಕುಟುಂಬಗಳ ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತು ಮತ್ತು ವಿಧಾನಸಭೆಗಳಿಗೆ ಬರಬೇಕು ಎಂಬುದು ನನ್ನ ಏಕೈಕ ಆಶಯವಾಗಿತ್ತು. ಆದರೆ ದುರದೃಷ್ಟವಶಾತ್, ಡಿಎಂಕೆ ಮತ್ತು ಕಾಂಗ್ರೆಸ್ ತಮ್ಮ ದ್ವೇಷದ ರಾಜಕೀಯದಿಂದ ಇದನ್ನು ಹಳಿತಪ್ಪಿಸಿವೆ ಎಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದರು.

ತಮಿಳುನಾಡಿನ ಸ್ಥಾನಗಳ ಬಗ್ಗೆ ಸುಳ್ಳು ಸೃಷ್ಟಿ; ಡಿಎಂಕೆ ವಿರುದ್ಧ ವಾಗ್ದಾಳಿ

ತಮಿಳುನಾಡಿನ ಸ್ಥಾನಗಳ ಕಡಿತದ ಬಗ್ಗೆ ಡಿಎಂಕೆ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಕಿಡಿಕಾರಿದ ಪ್ರಧಾನಿ, 2011 ರ ಜನಗಣತಿಯ ಆಧಾರದ ಮೇಲೆ ತಮಿಳುನಾಡು ಇನ್ನೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಆದರೆ ಡಿಎಂಕೆ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿ ಬಹಿರಂಗಗೊಂಡಿದೆ. ಕಪ್ಪು ಬಟ್ಟೆಗಳನ್ನು ಧರಿಸುವ ಮೂಲಕ ಡಿಎಂಕೆ ತನ್ನ ತಪ್ಪು ಉದ್ದೇಶಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಜನರು ನಿಮ್ಮ ಕಪ್ಪು ಕಾರ್ಯಗಳನ್ನು ತಿಳಿದಿದ್ದಾರೆ ಮತ್ತು ನೀವು ಇನ್ನು ಮುಂದೆ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಡಿಎಂಕೆಗೆ ಹೇಳಿಕೊಳ್ಳಲು ಯಾವುದೇ ಸಾಧನೆಗಳಿಲ್ಲ, ಅದಕ್ಕಾಗಿಯೇ ಅವರು ಭಯವನ್ನು ಹರಡುತ್ತಿದ್ದಾರೆ. ಪ್ರಸ್ತುತ ಅನುಪಾತದ ಪ್ರಾತಿನಿಧ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಡಿಎಂಕೆ ಮೊದಲೇ ಹೇಳಿತ್ತು, ನಾವು ಅದನ್ನು ಪ್ರಸ್ತಾಪಿಸಿದಾಗ ಈಗ ಯು-ಟರ್ನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಕುಟುಂಬ ರಾಜಕಾರಣದ ವಿರುದ್ಧ ಕಿಡಿ

ಮಹಿಳೆಯರು ರಾಜಕೀಯವಾಗಿ ಮುನ್ನೆಲೆಗೆ ಬರುವುದು ಡಿಎಂಕೆ ಮತ್ತು ಕಾಂಗ್ರೆಸ್‌ಗೆ ಇಷ್ಟವಿಲ್ಲ ಎಂದು ಆರೋಪಿಸಿದ ಮೋದಿ, ಈ ಕುಟುಂಬ ರಾಜಕಾರಣದ ಪಕ್ಷಗಳು ಅಧಿಕಾರವು ಕೇವಲ ತಮ್ಮ ಸ್ವಂತ ಕುಟುಂಬಗಳೊಳಗೆ ಸೀಮಿತವಾಗಿರಬೇಕೆಂದು ಬಯಸುತ್ತವೆ. ಮಹಿಳೆಯರು ಏರುವುದನ್ನು ನೋಡಿ ಇವರಿಗೆ ಯಾಕೆ ಇಷ್ಟು ತೊಂದರೆಯಾಗುತ್ತಿದೆ ಎಂದು ಪ್ರಶ್ನಿಸಿದರು.
ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ಭವಿಷ್ಯ ನುಡಿದ ಪ್ರಧಾನಿ, ತಮಿಳು ಜನರು ಎನ್‌ಡಿಎ ಬಂದಿದೆ, ಡಿಎಂಕೆ ಹೊರಗಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾರೆ ಎಂದರು. ಕೊಯಮತ್ತೂರಿನ ಜನರು ಯಾವಾಗಲೂ ಅಭಿವೃದ್ಧಿಯ ರಾಜಕೀಯದೊಂದಿಗೆ ನಿಂತಿದ್ದಾರೆ ಎಂದು ಶ್ಲಾಘಿಸಿದ ಅವರು, ಇಂದು ರಾತ್ರಿ 8.30 ಕ್ಕೆ ಈ ವಿಷಯದ ಬಗ್ಗೆ ಮತ್ತಷ್ಟು ವಿವರವಾಗಿ ಚರ್ಚಿಸುವುದಾಗಿ ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net