ಛತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕುರಿತು ಅಪಹಾಸ್ಯ: ಕಾಂಗ್ರೆಸ್ ಹಾಸ್ಯನಟರು ಮತ್ತು ಜೋಕರ್ಸ್ಗಳ ಪಕ್ಷ ಎಂದು ಬಿಜೆಪಿ ಆಕ್ರೋಶ | BJP
ಪ್ರಧಾನಿ ಮೋದಿ ಕುರಿತು ಅಪಹಾಸ್ಯ ಮಾಡುತ್ತಿರುವ ಸ್ಟ್ಯಾಂಡ್ ಆಪ್ ಕಾಮಿಡಿಯನ್ ಪುಲ್ಕಿತ್ ಮಣಿ
Published on:
Copied
Follow Us
ನವದೆಹಲಿ: ಶನಿವಾರ(ಸೆ. 19) ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಛತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿಯವರನ್ನು ಅಪಹಾಸ್ಯ ಮಾಡಲಾಗಿದ್ದು, ಈ ಕುರಿತು ಬಿಜೆಪಿ(BJP) ತೀವ್ರ ಆಕ್ರೋಶ ವ್ಯಕ್ತಡಿಸಿದೆ.
ವಿದ್ಯಾರ್ಥಿ ಕೇಂದ್ರಿತವಾಗಿ ನಡೆದ ಕಾರ್ಯಕ್ರಮದಲ್ಲಿ ಸ್ಟ್ಯಾಂಡ್ ಆಪ್ ಕಾಮಿಡಿಯನ್ ಪುಲ್ಕಿತ್ ಮಣಿ ಅವರು ರಾಹುಲ್ ಗಾಂಧಿಯೊಂದಿಗೆ ವೇದಿಕೆ ಹಂಚಿಕೊಂಡು ಪ್ರಧಾನಿ ಮೋದಿಯವರು ವಿದೇಶಿ ನಾಯಕರೊಂದಿಗೆ ನಡೆದುಕೊಳ್ಳುವ ಶೈಲಿಯನ್ನು ಅಪಹಾಸ್ಯ ಮಾಡಿದ್ದಾರೆ. ಅದರ ವಿಡಿಯೋವನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಪಕ್ಷವು ಹಾಸ್ಯ ನಟರು ಮತ್ತು ಜೋಕರ್ಸ್ಗಳ ಪಕ್ಷವಾಗಿ ಮಾರ್ಪಟ್ಟಿದೆ. ಅವರು ಶಾಶ್ವತವಾಗಿ ನಿರ್ಗಮಿಸಿದ್ದಾರೆ, ಅಂತಿಮ ನಮನ ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹ ಮೋದಿ ಕುರಿತಾದ ಅಪಹಾಸ್ಯವನ್ನು ಖಂಡಿಸಿದ್ದು, ಅತ್ಯಂತ ನಾಚಿಕೆಗೇಡಿನ ಮತ್ತು ಅಸಹ್ಯಕರ ಸಂಗತಿ! ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ನೈತಿಕ ದಿವಾಳಿತನದ ಅತ್ಯಂತ ಕೆಳಮಟ್ಟಕ್ಕೆ ಇಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳೊಂದಿಗಿನ ಸಂವಾದವೊಂದನ್ನು ಬಳಸಿಕೊಂಡು ಪ್ರಧಾನಿ ಮೋದಿ ಅವರ ದಿವಂಗತ ತಾಯಿಯನ್ನು ಅಪಹಾಸ್ಯ ಮಾಡುವುದು ಮತ್ತು ಅವಮಾನಿಸುವುದು, ಮೂಲಭೂತ ಮಾನವೀಯ ಸಂವೇದನೆ ಹಾಗೂ ರಾಜಕೀಯ ಸಂಸ್ಕೃತಿಯ ಸಂಪೂರ್ಣ ಕೊರತೆಯನ್ನು ಎತ್ತಿ ತೋರಿಸುತ್ತದೆ. ರಾಜಕೀಯ ವಿರೋಧ ಪಕ್ಷದ ಪಾತ್ರವು ಇಂತಹ ಅಗ್ಗದ ಪ್ರದರ್ಶನಗಳಿಗೆ ಅಥವಾ ಹಿರಿಯರು ಹಾಗೂ ಪೋಷಕರ ವಿರುದ್ಧ ಅವಮಾನಕಾರಿ ಮಾತುಗಳನ್ನಾಡುವುದಕ್ಕೆ ಸೀಮಿತವಾಗಬಾರದು. ಅದು ಭಾರತೀಯ ಸಂಸ್ಕೃತಿಯಲ್ಲ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕನ ಸ್ಥಾನವು ಮಹತ್ತರವಾದ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ. ಆದರೂ ರಾಹುಲ್ ಗಾಂಧಿ ಅವರು ಆ ಹುದ್ದೆಯ ಘನತೆಯನ್ನು ಎತ್ತಿಹಿಡಿಯುವಲ್ಲಿ ಪದೇ-ಪದೇ ವಿಫಲರಾಗುತ್ತಿದ್ದಾರೆ. ಮತ್ತು ಆ ಮೂಲಕ ದೇಶಕ್ಕೆ ಅಪಖ್ಯಾತಿ ತರುತ್ತಿದ್ದಾರೆ. ರಾಜಕೀಯ ಹೋರಾಟಗಳು ನೀತಿ ಮತ್ತು ದೂರದೃಷ್ಟಿಯ ಆಧಾರದ ಮೇಲೆ ನಡೆಯಬೇಕು. ಆದರೆ ಹೀನಾಯವಾದ ವೈಯಕ್ತಿಕ ದಾಳಿಗಳನ್ನು ನಡೆಸುವುದು ರಾಜಕೀಯವಲ್ಲ. ಇದೇ ರೀತಿಯ ವಿಷಪೂರಿತ ಮತ್ತು ನಿಂದನಾತ್ಮಕ ಮನಸ್ಥಿತಿಯಿಂದಾಗಿಯೇ ಸಾರ್ವಜನಿಕರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).