ಪಟನಾ: ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಮತ್ತು ಡಬಲ್ ಮೀನಿಂಗ್ ಹಾಡುಗಳನ್ನು ನುಡಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಹಾರದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ಸಾಮ್ರಾಟ್ ಚೌಧರಿ (Samrat Choudhary) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಸ್ಸುಗಳು, ಟ್ರಕ್ಗಳು, ಆಟೋರಿಕ್ಷಾಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಭೋಜ್ಪುರಿ, ಮಗಾಹಿ, ಮೈಥಿಲಿ ಅಥವಾ ಯಾವುದೇ ಇತರ ಭಾಷೆಯಲ್ಲಿ ಅಶ್ಲೀಲ ಹಾಡುಗಳನ್ನು ನುಡಿಸುವುದು ಕಂಡುಬಂದರೆ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ನಿರ್ದೇಶನ ನೀಡಿದ್ದಾರೆ.
ಅಶ್ಲೀಲ ಹಾಡುಗಳ ಸಾರ್ವಜನಿಕ ಪ್ರಸಾರವು ಸಮಾಜದ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದು ವಿಷಯವು ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಹಾಳು ಮಾಡುತ್ತದೆ ಮತ್ತು ಸಾಮಾಜಿಕ ಪರಿಸರದಲ್ಲಿ ಅಶ್ಲೀಲತೆಯನ್ನು ಉತ್ತೇಜಿಸುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸುವವರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಡಿಸಿಎಂ ಚೌಧರಿ ಎಚ್ಚರಿಸಿದ್ದಾರೆ.
ಈ ರೀತಿಯ ವರ್ತನೆಗಳನ್ನು ತಡೆಯಲು ವಿಶೇಷ ಅಭಿಯಾನಗಳನ್ನು ಪ್ರಾರಂಭಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಚೌಧರಿ, ಆದೇಶ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಹಾಡುಗಳನ್ನು ಪ್ರಸಾರ ಮಾಡಿದ್ದೇ ಆದಲ್ಲಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬೆಂಗಾವಲು ಪಡೆಗೆ ಉನ್ನತ ದರ್ಜೆಯ ವಾಹನ ಖರೀದಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಕ್ಷಣೆಗಾಗಿ ನಾಲ್ಕು ಹೈ ಸೆಕ್ಯುರಿಟಿ ವಾಹನಗಳನ್ನು ಖರೀದಿಸಲು ಚಿಂತನೆ ನಡೆದಿದೆ ಎನ್ನಲಾಗಿದ್ದು, ಸಿಎಂ ಶೀಘ್ರದಲ್ಲೇ ಗುಂಡು ನಿರೋಧಕ ಐಷಾರಾಮಿ ಎಸ್ಯುವಿಯಲ್ಲಿ ಪ್ರಯಾಣಿಸಬಹುದು, ಬಹುಶಃ ರೇಂಜ್ ರೋವರ್ನಂತಹ ಮಾದರಿಯಲ್ಲಿರಬಹುದು ಎಂದು ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಸರ್ಕಾರಿ ಕಾರ್ಯಕ್ರಮಗಳು ಮತ್ತು ಅಧಿಕೃತ ಭೇಟಿಗಳ ಸಮಯದಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳು ಮತ್ತು ಇಲ್ಲಿಯೇ ತಯಾರಿಸಿದ ಕಾರುಗಳನ್ನು ಬಳಸುತ್ತಿದ್ದರು. ಆದರೆ ಈಗ ಭದ್ರತಾ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಭದ್ರತೆಯ ವಾಹನಗಳನ್ನು ಖರೀದಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ(ಏಜೆನ್ಸೀಸ್).