ಪ್ರಧಾನಿ ನಿವಾಸದ ಹೊರಗೆ ವಿಪಕ್ಷಗಳ ಪ್ರತಿಭಟನೆ: ಇದು ಮೋದಿ-ರಾಹುಲ್​ ಪ್ಲಾನ್ ಎಂದು ಆಮ್​ ಆದ್ಮಿ ಲೇವಡಿ! AAP Slams Congress

ನೀಟ್ ಅಕ್ರಮ ಖಂಡಿಸಿ ಪ್ರಧಾನಿ ನಿವಾಸದ ಹೊರಗೆ ರಾಹುಲ್ ಗಾಂಧಿ ನಡೆಸಿದ ಧರಣಿ
ನೀಟ್ ಅಕ್ರಮ ಖಂಡಿಸಿ ಪ್ರಧಾನಿ ನಿವಾಸದ ಹೊರಗೆ ರಾಹುಲ್ ಗಾಂಧಿ ನಡೆಸಿದ ಧರಣಿ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಅಕ್ರಮ ಖಂಡಿಸಿ ಪ್ರಧಾನಿ ನಿವಾಸದ ಹೊರಗೆ ರಾಹುಲ್ ಗಾಂಧಿ ನಡೆಸಿದ ಧರಣಿ
  • 'ಮೋದಿ-ರಾಹುಲ್ ಜುಗಲ್‌ಬಂದಿ' ಎಂದು ಆಮ್ ಆದ್ಮಿ ಪಾರ್ಟಿ ಲೇವಡಿ
  • ಪ್ರಧಾನಿ ನಿವಾಸದ ಮುಂದೆ ಹೈಡ್ರಾಮಾ & ಬಂಧನ!
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಈಗ ಕೇವಲ ವಿದ್ಯಾರ್ಥಿಗಳ ಆಕ್ರೋಶವಾಗಿ ಉಳಿದಿಲ್ಲ, ಬದಲಿಗೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿ ಮಾರ್ಪಟ್ಟಿವೆ.
ಮಂಗಳವಾರ (ಜುಲೈ 21) ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಒಂದೆಡೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ಧರಣಿ ಕೂತಿದ್ದರೆ, ಇನ್ನೊಂದೆಡೆ ಇದನ್ನು ಬಿಜೆಪಿ-ಕಾಂಗ್ರೆಸ್ ನಡುವಿನ ಡ್ರಾಮಾ ಎಂದು ಆಮ್ ಆದ್ಮಿ ಪಾರ್ಟಿ (AAP Slams Congress) ವಾಗ್ದಾಳಿ ನಡೆಸಿದೆ.

ಮೋದಿ ರಾಜೀನಾಮೆ ನೀಡಲಿ!

ನೀಟ್ ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ, ಪ್ರಧಾನಿ ಮೋದಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಮುಂಭಾಗ ದಿಢೀರ್ ಧರಣಿ ಕುಳಿತರು.

'ಕ್ಯಾ ಜುಗಲ್‌ಬಂದಿ ಹೈ!': ಎಎಪಿ ನಾಯಕಿ ಅತಿಶಿ ಅಕ್ರೋಶ

ಆದರೆ, ಕಾಂಗ್ರೆಸ್ ನಡೆಸಿದ ಈ ಧರಣಿಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಟೀಕಿಸಿದೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕಿ ಅತಿಶಿ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿ, ಸಿಜೆಪಿ (ಕಾಂಗ್ರೆಸ್ ಜನತಾ ಪಾರ್ಟಿ) ಮತ್ತು ಸೋನಮ್ ವಾಂಗ್ಚುಕ್ ಜಂತರ್ ಮಂತರ್‌ನಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಮೋದಿ ಸರ್ಕಾರ ಅವರನ್ನ ತಿರುಗಿಯೂ ನೋಡಿರಲಿಲ್ಲ.
ಆದರೆ, ರಾಹುಲ್ ಗಾಂಧಿಗೆ ಪ್ರಧಾನಿ ನಿವಾಸದ ಹೊರಗಡೆಯೇ ಧರಣಿ ಕೂರಲು ಅನುಮತಿ ಸಿಗುತ್ತದೆ. ಧರಣಿ ಆರಂಭವಾದ ಒಂದೇ ಗಂಟೆಯಲ್ಲಿ ಮೋದಿ ಸರ್ಕಾರ ಮಾತುಕತೆಗೆ ಇಳಿಯುತ್ತದೆ. ವಾಹ್! ಕ್ಯಾ ಜುಗಲ್‌ಬಂದಿ ಹೈ! ಎಂದು ವ್ಯಂಗ್ಯವಾಡಿದ್ದಾರೆ.

ಜನರ ಗಮನ ಬೇರೆಡೆ ಸೆಳೆಯಲು ಮೋದಿ-ರಾಹುಲ್ ಪ್ಲಾನ್!

ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಇದೇ ರೀತಿ ವಾಗ್ದಾಳಿ ನಡೆಸಿ, ಮೂಲ ಪ್ರತಿಭಟನೆಯನ್ನು ದುರ್ಬಲಗೊಳಿಸಲೆಂದೇ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಯವರನ್ನು ತಮ್ಮ ಸ್ವಂತ ನಿವಾಸದ ಮುಂದೆ ಪ್ರತಿಭಟನೆ ನಡೆಸುವಂತೆ ಮಾಡಿದ್ದಾರೆ. ಇದು ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ಆರೋಪಿಸಿದ್ದಾರೆ.
ದೆಹಲಿ ಎಎಪಿ ಮುಖ್ಯಸ್ಥ ಸೌರಭ್ ಭಾರದ್ವಾಜ್ ಮಾತನಾಡಿ, ಕಾಂಗ್ರೆಸ್‌ನ ಪ್ರಮುಖ ನಾಯಕರು ದೇಶದ ಯುವಜನತೆಯ ನಿಜವಾದ ಚಳವಳಿಯ ಬಗ್ಗೆ ಮೌನವಾಗಿದ್ದಾರೆ. ಆದರೆ, ಅವರ ಸೋಷಿಯಲ್ ಮೀಡಿಯಾ ಖಾತೆಗಳು ಮತ್ತು ಪ್ರಭಾವಿಗಳು ಈ ಪ್ರತಿಭಟನೆಯನ್ನು ಹತ್ತಿಕ್ಕಲು ಮೊದಲ ದಿನದಿಂದಲೂ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪ್ರಧಾನಿ ನಿವಾಸದ ಮುಂದೆ ಹೈಡ್ರಾಮಾ & ಬಂಧನ!

ಧರಣಿ ಆರಂಭವಾದ ಸುಮಾರು 20 ನಿಮಿಷಗಳಲ್ಲೇ ಪಿಎಂಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ, ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ರಾಹುಲ್ ಗಾಂಧಿ ಈ ಮನವಿಯನ್ನು ನಿರಾಕರಿಸಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ, ದೆಹಲಿ ಪೊಲೀಸರು ರಂಗಪ್ರವೇಶ ಮಾಡಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ವಶಕ್ಕೆ ಪಡೆದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net