ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗಿನ ಆಂತರಿಕ ಭಿನ್ನಮತ ಈಗ ಹೊಸ ತಿರುವು ಪಡೆದುಕೊಂಡಿದ್ದು, ಪಕ್ಷದ ಹಿರಿಯ ಸಂಸದ ಶತ್ರುಘ್ನ ಸಿನ್ಹಾ(Shatrughan Sinha ) ಅವರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೆಚ್ಚುತ್ತಿರುವ ಪ್ರಭಾವದ ವಿರುದ್ಧ ಟಿಎಂಸಿಯ ಹಲವು ಸಂಸದರು ಮತ್ತು ಮುಖಂಡರು ಬಂಡಾಯದ ಬಾವುಟ ಹಾರಿಸುತ್ತಿರುವ ಬೆನ್ನಲ್ಲೇ, ಶತ್ರುಘ್ನ ಸಿನ್ಹಾ ತಮ್ಮ ರಾಜಕೀಯ ನಿಷ್ಠೆ ಕೇವಲ ಮಮತಾ ಬ್ಯಾನರ್ಜಿ ಅವರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ನಾಯಕಿ ಒಬ್ಬರೇ, ಅವರು ಮಮತಾ ಬ್ಯಾನರ್ಜಿ; ಅಭಿಷೇಕ್ ಬ್ಯಾನರ್ಜಿ ಅಲ್ಲ ಎಂದು ನೇರವಾಗಿ ಹೇಳಿದ್ದಾರೆ.