ಒಲಿಂಪಿಕ್ ಹೀರೋಗೆ 'ನೀಟ್' ಸಂಕಷ್ಟ: ವೈರಲ್ ಆದ ಹಳೆಯ ವಿಡಿಯೋ, ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್‌ಗೆ ನೆಟ್ಟಿಗರ ತರಾಟೆ! Rajyavardhan Singh Rathore

ರಾಜ್ಯವರ್ಧನ್ ಸಿಂಗ್ ರಾಥೋಡ್‌
ರಾಜ್ಯವರ್ಧನ್ ಸಿಂಗ್ ರಾಥೋಡ್‌
Published on
ವೈರಲ್​: ನೀಟ್​ ಯುಜಿ ಪರೀಕ್ಷಾ ಪತ್ರಿಕೆ ಸೋರಿಕೆಯಾದ ಹಿನ್ನಲೆ ಪರೀಕ್ಷೆ ರದ್ದಾಗಿದದು, ಇದರ ಬಗ್ಗೆ ತನಿಖೆ ನಡೆಸುವಂತೆ ಸಿಬಿಐ ಗೆ ಪ್ರಕರಣವನ್ನು ವಹಿಸಲಾಗಿದೆ. ರಾಜಸ್ಥಾನದಲ್ಲಿ ಈ ಪೇಪರ್​ ಸೋರಿಕೆ ಬಗ್ಗೆ ಮಾಹಿತಿ ದೊರೆಯುತ್ತಿದಂತೆ ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ಈ ಮೇ. 3 ರಂದು ನಡೆದಿದ್ದ ನೀಟ್​ ಯುಜಿ ಪರೀಕ್ಷೆಯನ್ನು ರದ್ದುಪಡಿಸಿ, ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸುವುದಾಗಿ ಹೇಳಿದೆ.

ಅಂದು ಹಾಕಿದ್ದ ಸವಾಲು.. ಇಂದು ತಿರುಗುಬಾಣ!

ಕೆಲವು ತಿಂಗಳುಗಳ ಹಿಂದೆ ಖಾಸಗಿ ವಾಹಿನಿಯೊಂದರ ಶೃಂಗಸಭೆಯಲ್ಲಿ ಭಾಗವಹಿಸಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ (Rajyavardhan Singh Rathore), ಅತ್ಯಂತ ಆತ್ಮವಿಶ್ವಾಸದಿಂದ ಒಂದು ಮಾತು ಹೇಳಿದ್ದರು. ನಿರೂಪಕಿ ಮೇಘಾ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಸ್ವಲ್ಪ ಗರಂ ಆಗಿದ್ದ ಸಚಿವರು, ಕಳೆದ ಎರಡು ವರ್ಷಗಳಲ್ಲಿ ರಾಜಸ್ಥಾನದಲ್ಲಿ ಒಂದೇ ಒಂದು ಪೇಪರ್ ಸೋರಿಕೆಯಾಗಿಲ್ಲ, ಬೇಕಿದ್ದರೆ ಗೂಗಲ್ ಮಾಡಿ ನೋಡಿ ಎಂದು ಅಲ್ಲಿ ನೆರೆದಿದ್ದ ಪತ್ರಕರ್ತರಿಗೆ ಓಪನ್ ಚಾಲೆಂಜ್ ಹಾಕಿದ್ದರು.
ಆಗ ಸಚಿವರು ಹೆಮ್ಮೆಯಿಂದ ಹಾಕಿದ್ದ ಅದೇ ವಿಡಿಯೋ ಈಗ ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಕಿಯಂತೆ ಹರಡುತ್ತಿದೆ. ಕಾರಣ ಈ ಸಲದ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಸಚಿವರ ರಾಜ್ಯದ ಕೋಟಾ ಹಾಗೂ ಸುತ್ತಲಿನ ನಗರಗಳಿಗೆ ಸಂಬಂಧಿಸಿದೆ.

ಪೇಚಿಗೆ ಬಿದ್ದ ಸಚಿವ!

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವುದಾಗಿ ಘೋಷಿಸುತ್ತಿದ್ದಂತೆ ನೆಟ್ಟಿಗರು ಹಳೆಯ ವಿಡಿಯೋ ಹಿಡಿದು ಸಚಿವರ ಬೆನ್ನು ಬಿದ್ದಿದ್ದಾರೆ. ಸಚಿವರೇ, ನಿಮ್ಮ ವಿಶ್ವಾಸ ಈಗ ಎಲ್ಲಿಗೆ ಹೋಯಿತು? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ರಾಜಸ್ಥಾನವು ದೇಶದ ಕೋಚಿಂಗ್ ಹಬ್ ಆಗಿರುವುದರಿಂದ, ಇಲ್ಲಿನ ಪರೀಕ್ಷಾ ವ್ಯವಸ್ಥೆಯ ಮೇಲೆ ಸಚಿವರು ಅತೀವ ನಂಬಿಕೆ ಇಟ್ಟಿದ್ದರು. ಆದರೆ ನೀಟ್ ಹಗರಣದ ಬೇರುಗಳು ರಾಜಸ್ಥಾನದ ಗಲ್ಲಿ ಗಲ್ಲಿಗಳಲ್ಲೂ ಕೇಳಿಬರುತ್ತಿರುವುದು ಅವರ ಸವಾಲಿಗೆ ಹಿನ್ನಡೆ ತಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆದ ನೆಟ್ಟಿಗರು

ರಾಜ್ಯವರ್ಧನ್ ಸಿಂಗ್ ಅವರ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಹರಿದುಬರುತ್ತಿದ್ದು, ಕಮೆಂಟ್ ಬಾಕ್ಸ್‌ನಲ್ಲಿ ಟ್ರೋಲ್‌ಗಳ ಸುರಿಮಳೆಯೇ ಆಗುತ್ತಿದೆ. ಒಬ್ಬ ಬಳಕೆದಾರರು ಗೂಗಲ್ ಮಾಡಿದೆವು ಸಚಿವರೇ, ಈಗ ರದ್ದಾಗಿರುವ ಪರೀಕ್ಷೆಯ ಪಟ್ಟಿಯೇ ಕಾಣಿಸುತ್ತಿದೆ, ಇದಕ್ಕೆ ಏನು ಹೇಳ್ತೀರಿ? ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಬ್ಬರು ಪೇಪರ್ ಲೀಕ್ ಆಗಲ್ಲ ಅಂತ ಶಪಥ ಮಾಡಿದ್ರಿ, ಈಗ ನಿಮ್ಮದೇ ರಾಜ್ಯದ ಲಿಂಕ್ ಸಿಗುತ್ತಿದೆಯಲ್ಲ, ಈಗ ಯಾರನ್ನು ಪ್ರಶ್ನಿಸಲಿ? ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು ನೇರವಾಗಿ ಎನ್‌ಟಿಎ ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆ ಎತ್ತಿದ್ದು, ಪರೀಕ್ಷೆ ನಡೆಸುವ ಯೋಗ್ಯತೆ ಎನ್‌ಟಿಎಗೆ ಇದೆಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜಕೀಯ ಸಂಚಲನ

ಈ ಬೆಳವಣಿಗೆ ರಾಜಸ್ಥಾನ ಬಿಜೆಪಿಗೆ ಮುಜುಗರ ತಂದಿಟ್ಟಿದೆ. ವಿರೋಧ ಪಕ್ಷಗಳು ಕೂಡ ಈ ವಿಡಿಯೋವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಯುವಕರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸುತ್ತಿವೆ. ಒಂದು ಕಾಲದಲ್ಲಿ ಒಲಿಂಪಿಕ್ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದ ರಾಥೋಡ್, ಈಗ ಪೇಪರ್ ಲೀಕ್ ಎಂಬ ರಾಜಕೀಯ ಗುರಿ ತಪ್ಪಿ ಟ್ರೋಲ್ ಆಗುತ್ತಿರುವುದು ಅವರ ಅಭಿಮಾನಿಗಳಿಗೂ ಬೇಸರ ತಂದಿದೆ ಎಂದರೆ ಸುಳ್ಳಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net