ಓಲ್ಡ್​ ಮಾಂಕ್ ಅನ್ನು ರಮ್ ಎಂದು ಮಾರಾಟ ಮಾಡಲು ಸಾಧ್ಯವಿಲ್ಲ; ಹೈಕೋರ್ಟ್​​​ಗೆ ತಿಳಿಸಿದ ಎಫ್​ಎಸ್​ಎಸ್​​​ಎಐ | Old Monk

ಓಲ್ಡ್ ಮಾಂಕ್
ಓಲ್ಡ್ ಮಾಂಕ್
Published on
ಮುಂಬೈ: ನ್ಯೂಟ್ರಲ್ ಸ್ಪಿರಿಟ್ ಮತ್ತು ರಮ್ ಫ್ಲೇವರ್ ಬಳಸಿ ತಯಾರಿಸುವುದರಿಂದ ಓಲ್ಡ್​ ಮಾಂಕ್(Old Monk) ಅನ್ನು ರಮ್ ಎಂದು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಗುರುವಾರ(ಸೆ. 03) ಬಾಂಬೆ ಹೈಕೋರ್ಟ್​ಗೆ ತಿಳಿಸಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮದ್ಯಗಳ ಉತ್ಪನ್ನದಲ್ಲಿ ಕೃತಕ ವಸ್ತುಗಳ ಬಳಕೆ ಬಗ್ಗೆ ವರದಿ ಬಂದಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡ ನಿಯಮಗಳ ಕಾಯ್ದೆ-2018 ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಎಫ್​ಎಸ್ಎಸ್ಎಐ ಮಹಾರಾಷ್ಟ್ರದಲ್ಲಿ ‘ಓಲ್ಡ್ ಮಾಂಕ್’ ಸೇರಿದಂತೆ ಕೆಲವು ಪ್ರಮುಖ ಮದ್ಯ ಬ್ರ್ಯಾಂಡ್‌ಗಳ ಮಾರಾಟಕ್ಕೆ ನಿಷೇಧ ಹೇರಿದೆ.
ಈ ಕ್ರಮವನ್ನು ಪ್ರಶ್ನಿಸಿ ಮದ್ಯ ಮಾರಾಟ ಕಂಪನಿಯೂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ವಿ. ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಎ. ಅಂಖಾದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, ಎಫ್​ಎಸ್ಎಸ್ಎಐ ಪರ ವಕೀಲರು, ನಮ್ಮ ಆಕ್ಷೇಪಣೆ ಲೇಬಲಿಂಗ್ ಬಗ್ಗೆ ಅಲ್ಲ, ಓಲ್ಡ್ ಮಾಂಕ್ ಅನ್ನು ರಮ್ ಎಂದು ಮಾರಾಟ ಮಾಡುವ ಬಗ್ಗೆ ಎಂದು ಹೇಳಿದರು.
ಓಲ್ಡ್ ಮಾಂಕ್ ತಯಾರಿಕೆಯಲ್ಲಿ ನ್ಯೂಟ್ರಲ್ ಸ್ಪಿರಿಟ್ ಮತ್ತು ಕೃತಕ ರಮ್ ಫ್ಲೇವರ್ ಅನ್ನು ಬಳಸಲಾಗುತ್ತಿದೆ. ಹೀಗಾಗಿ ಇದನ್ನು ನೇರವಾಗಿ 'ರಮ್' ಎಂದು ಮಾರಾಟ ಮಾಡಲು ಅವಕಾಶವಿಲ್ಲ. ರಮ್ ಅಥವಾ ವಿಸ್ಕಿಯಂತಹ ಪ್ರಮಾಣಿತ ಪಾನೀಯಗಳು ತಮ್ಮದೇ ಆದ ಸ್ವಾಭಾವಿಕ ರುಚಿ ಮತ್ತು ಪರಿಮಳವನ್ನು ಹೊಂದಿರಬೇಕು. ಆದರೆ ರಾಸಾಯನಿಕ ಫ್ಲೇವರ್‌ಗಳನ್ನು ಬೆರೆಸಿ ಗ್ರಾಹಕರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ವಾದಿಸಿದರು.
ಇದೇ ವೇಳೆ ಓಲ್ಡ್​ ಮಾಂಕ್ ನ್ಯಾಯಾಲಯಕ್ಕೆ ತನ್ನ ಲೇಬಲ್​ನಲ್ಲಿನ 7 ವರ್ಷಗಳ ಹಳೆಯ ಮಿಶ್ರಣ ಎಂಬ ಪದಗುಚ್ಛವನ್ನು ತೆಗೆದುಹಾಕಲು ಮತ್ತು ತನ್ನ ಉತ್ಪನ್ನ ಲೇಬಲ್‌ಗಳನ್ನು ಮಾರ್ಪಡಿಸಲು ಸಿದ್ಧವಾಗಿದೆ ತಿಳಿಸಿತು. ಈ ವೇಳೆ ಪೀಠವು ಪರಿಷ್ಕೃತ ಲೇಬಲ್ ಅನ್ನು ಗುರುವಾರದೊಳಗೆ ಸಲ್ಲಿಸುವಂತೆ ಕಂಪನಿಗೆ ನಿರ್ದೇಶನ ನೀಡಿತು. ಉತ್ಪನ್ನವನ್ನು ಸ್ಪಷ್ಟವಾಗಿ ಗುರುತಿಸಲು ಅನುಕೂಲವಾಗುವಂತೆ ಪ್ಯಾಕೇಜಿಂಗ್‌ನಲ್ಲಿ ಇರಬೇಕಾದ ನಿರ್ದಿಷ್ಟ ವಿವರಗಳು ಮತ್ತು ಅಗತ್ಯತೆಗಳನ್ನು ವಿವರಿಸುವಂತೆಯೂ ನ್ಯಾಯಾಲಯವು ಆಹಾರ ನಿಯಂತ್ರಣ ಪ್ರಾಧಿಕಾರಕ್ಕೆ ಸೂಚಿಸಿದೆ. ಮತ್ತು ವಿಚಾರಣೆಯನ್ನು ಸೆ. 11ಕ್ಕೆ ಮುಂದೂಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net