ಬಿಜೆಪಿ ಬಿಟ್ಟ ಬಳಿಕ ನಾರ್ತ್ v/s ಸೌತ್; ರಾಜಕಾರಣದಲ್ಲಿ ಕಿಚ್ಚು ಹೊತ್ತಿಸಿದ ಅಣ್ಣಾಮಲೈ ಟ್ವೀಟ್: ದ್ರಾವಿಡ ರಾಜಕಾರಣದತ್ತ ವಾಲಿದರೇ? | K Annamalai

ಕೆ.ಅಣ್ಣಾಮಲೈ
ಕೆ.ಅಣ್ಣಾಮಲೈ
Published on
ಚೆನ್ನೈ: ತಮಿಳುನಾಡು ಮತ್ತು ಇಡೀ ದೇಶದಲ್ಲಿ ಮಾಜಿ ಬಿಜೆಪಿ ನಾಯಕ ಕೆ.ಅಣ್ಣಾಮಲೈ(K Annamalai) ಮಾಡಿದ ಒಂದು ಟ್ವೀಟ್ ರಾಜಕಾರಣದಲ್ಲಿ ವಿವಾದದ ಕಿಡಿಹೊತ್ತಿಸಿದ್ದು, ಈ ಹಿಂದಿನಿಂದಲೂ ನಿರೂಪಣೆಗೊಂಡ ಉತ್ತರ ಭಾರತ v/s ದಕ್ಷಿಣ ಭಾರತ ಎಂಬ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದ್ದು, ಬಿಜೆಪಿಯನ್ನು ತೊರೆದ ಬಳಿಕ ಅಣ್ಣಾಮಲೈ ಸಹ ದ್ರಾವಿಡ ರಾಜಕಾರಣದತ್ತ ವಾಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ತಮಿಳುನಾಡಿನಲ್ಲಿ ಕಳೆದ 50 ಮತ್ತು 60 ದಶಕದಿಂದಲೂ ರಾಜಕಾರಣ ತಮಿಳು ಗುರುತು, ಭಾಷೆ, ದ್ರಾವಿಡ ಸಿದ್ಧಾಂತ, ಪ್ರಾದೇಶಿಕ ಹೆಮ್ಮೆ ಹಾಗೂ ಉತ್ತರ ಭಾರತ ವಿರೋಧಿ ಸಿದ್ದಾಂತದ ಮೇಲೆ ನಡೆದಿದ್ದು, ಎರಡೂ ದ್ರಾವಿಡ ಪಕ್ಷಗಳು ಅದರ ಸುತ್ತವೇ ರಾಜಕಾರಣ ಮಾಡುತ್ತಾ ಪ್ರಾಬಲ್ಯ ಸಾಧಿಸಿದ್ದವು. ಇತ್ತೀಚೆಗೆ ಅದೇ ಸಿದ್ದಾಂತದ ನಕಲುವಾದಿಯಾಗಿ ನಟ ವಿಜಯ್ ನೇತೃತ್ವದ ಟಿವಿಕೆ ಕೂಡ ಅಧಿಕಾರವನ್ನು ಹಿಡಿದಿದೆ.
ಅಣ್ಣಾಮಲೈ ಸಹ ದ್ರಾವಿಡ ಪಕ್ಷಗಳಂತೆಯೇ ಆದರೆ ಸ್ವಲ್ಪ ಬದಲಾವಣೆಯೊಂದಿಗೆ ತಮ್ಮ ರಾಜಕೀಯ ನಿರೂಪಣೆಯನ್ನೂ ರೂಪಿಸುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಬಿಜೆಪಿ ತೊರೆದ ಬಳಿಕ ವಿ ದ ಲೀಡರ್ ಎಂಬ ಹೊಸ ರಾಜಕೀಯ ಚಳುವಳಿಯನ್ನು ಪ್ರಾರಂಭಿಸಿರುವ ಅವರು, ಇತ್ತೀಚಿನ ರಾಜ್ಯದಲ್ಲಿ ಗಂಭೀರ ಅಪರಾಧಗಳಲ್ಲಿ ಉತ್ತರ ಭಾರತೀಯ ಕಾರ್ಮಿಕರು ಭಾಗವಹಿಸುತ್ತಿರುವುದನ್ನು ಉಲ್ಲೇಖಿಸಿ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸೋಮವಾರ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಾಕಿರುವ ಅವರು, ಅಪ್ರಾಪ್ತ ಬಾಲಕಿಯರನ್ನು ಒಳಗೊಂಡ ಇತ್ತೀಚಿನ ಎರಡು ಪ್ರಕರಣಗಳು ಸೇರಿ ಉತ್ತರ ಭಾರತೀಯರು ಭಾಗಿಯಾಗಿ ಬಂಧನವಾಗಿರುವ ಹಲವು ಕೇಸ್ ಉಲ್ಲೇಖಿಸಿ, ರಾಜ್ಯಕ್ಕೆ ಪ್ರವೇಶಿಸುವ ವಲಸಿಗರ ಬಗ್ಗೆ ಕಠಿಣ ತಪಾಸಣೆ ಕ್ರಮಕ್ಕೆ ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ವೇಳೆ ಡಿಎಂಕೆ ಸರ್ಕಾರದ ಉತ್ತರ ಭಾರತೀಯ ವಿರೋಧಿತನದ ನಿಲುವಿನ ಬಗ್ಗೆ ಕಟುವಾಗಿ ವಿಮರ್ಶೆ ಮಾಡಿದ್ದರು. ಮತ್ತು ಡಿಎಂಕೆ ಉತ್ತರ-ದಕ್ಷಿಣ ಎಂದು ವಿಭಜನೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದರು.

ಹಲವು ಭಾರಿ ಉತ್ತರದ ರಾಜ್ಯಗಳು ಎಂದು ಉಲ್ಲೇಖ

ಅಣ್ಣಾಮಲೈ ಮಾಡಿರುವ ಟ್ವೀಟ್​ನಲ್ಲಿ ಅವರು ಉತ್ತರ ಭಾರತೀಯರನ್ನು ನೇರವಾಗಿ ಟೀಕಿಸದಿದ್ದರೂ, ಅಪರಾಧದ ಬಗ್ಗೆ ಚರ್ಚಿಸುವಾಗ ಮತ್ತು ವಲಸಿಗರ ತಪಾಸಣೆಯ ಬಗ್ಗೆ ಹೆಚ್ಚಿನ ಮೇಲ್ವಿಚಾರಣೆಗೆ ಒತ್ತಾಯಿಸುವಾಗ ಪದೇ-ಪದೇ ಉತ್ತರ ಭಾರತದ ರಾಜ್ಯಗಳ ವ್ಯಕ್ತಿಗಳು ಎಂಬ ಪದವನ್ನು ಹಲವು ಭಾರಿ ಉಲ್ಲೇಖಿಸಿರುವುದು ರಾಜಕೀಯ ವೀಕ್ಷಕರು ಮತ್ತು ಸ್ಥಳೀಯರು ವಿಶೇಷವಾಗಿ ಗಮನಿಸುತ್ತಿದ್ದಾರೆ.
ಈ ಕುರಿತು ತಮಿಳುನಾಡಿನ ಬಿಜೆಪಿ ಬೆಂಬಲಿಗರಲ್ಲಿ ಪ್ರಮುಖರಾಗಿರುವ ಎಸ್​​.ಗುರುಮೂರ್ತಿ ಎಂಬುವರು ಎಕ್ಸ್​ನಲ್ಲಿ, ಅಣ್ಣಾಮಲೈ ಮತ್ತೊಂದು ದ್ರಾವಿಡ ಚಳುವಳಿಯತ್ತ ಹೆಜ್ಜೆ ಹಾಕುತ್ತಿದ್ದಾರೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿ ತೊರೆದ ನಂತರವೂ ನಾನು ಅವರನ್ನು ಯಾವಾಗಲೂ ಸಕಾರಾತ್ಮಕವಾಗಿ ನೋಡುತ್ತಿದ್ದೆ. ಆದರೆ ಉತ್ತರ ಭಾರತದ ರಾಜ್ಯಗಳ ವಿರುದ್ಧದ ಈ ನಿರೂಪಣೆ ಸ್ವೀಕಾರಾರ್ಹವಲ್ಲ. ಇದು ಮತ್ತೊಂದು ದ್ರಾವಿಡ ಚಳುವಳಿಯ ನಿರೂಪರಣೆಯೇ? ಅಥವಾ ಅದರತ್ತ ಹೆಜ್ಜೆ ಇಟ್ಟಿದ್ದಾರೆಯೇ? ಭವಿಷ್ಯ ಮಾತ್ರ ಹೇಳಬಲ್ಲದು ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net