Bihar Election | ಈ ದಿಗ್ವಿಜಯ ನಮ್ಮ ತಂದೆಯ ಎರಡು ದಶಕಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: ನಿತೀಶ್​ ಪುತ್ರ ನಿಶಾಂತ್

Bihar Election | ನಿತೀಶ್​ ಕುಮಾರ್ ಮತ್ತು ಪುತ್ರ  ನಿಶಾಂತ್ ಕುಮಾರ್
Bihar Election | ನಿತೀಶ್​ ಕುಮಾರ್ ಮತ್ತು ಪುತ್ರ ನಿಶಾಂತ್ ಕುಮಾರ್
Published on
ಪಟನಾ: ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ನಮ್ಮೆಲ್ಲರ ನಿರೀಕ್ಷೆಗೂ ಮೀರಿದ್ದಾಗಿದೆ, ಕಳೆದ ಎರಡು ದಶಕಗಳಿಂದ ನಮ್ಮ ತಂದೆ ಮಾಡಿರುವ ಕೆಲಸಕ್ಕೆ ರಾಜ್ಯದ ಮತದಾರರು ಪ್ರತಿಫಲದ ರೂಪದಲ್ಲಿ ದೊಡ್ಡ ಗೆಲುವನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ನಿಶಾಂತ್​, ನಮ್ಮ ತಂದೆ ಕಳೆದ ಇಪ್ಪತ್ತು ವರ್ಷದಿಂದ ರಾಜ್ಯದ ಬೆಳವಣಿಗೆಗೆ ಶ್ರಮಿಸಿದ ಕಾರಣ ನಮ್ಮ ಪಕ್ಷಕ್ಕೆ ಈ ಮಟ್ಟದ ಅಗಾಧ ಗೆಲುವು ಸಿಕ್ಕಿದೆ, ಈ ಅಭಿವೃದ್ದಿಯ ಪರ್ವವನ್ನು ಅವರು ಮುಂದುವರೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿತೀಶ್ ಕುಮಾರ್ ಹಿರಿಯ ಸಹೋದರ ಸತೀಶ್ ಕುಮಾರ್ ಕೂಡ ಮಾತನಾಡಿದ್ದು, ನಿತೀಶ್​ ಮಾಡಿರುವ ಕೆಲಸಕ್ಕೆ ಮತದಾರ ಸೂಕ್ತವಾದ ಜನಾದೇಶ ನೀಡಿದ್ದಾನೆ, ಅವರು ಯಾವುದೇ ರೀತಿಯ ಭೇದ ಭಾವ ಇಲ್ಲದೇ ಎಲ್ಲರಿಗಾಗಿ ಶ್ರಮಿಸಿದ್ದಾರೆ, ಮಹಿಳೆಯರ ಸಬಲೀಕರಣಕ್ಕೆ ತಮ್ಮ ಸಹೋದರನ ಕೊಡುಗೆ ಅಪಾರವಾಗಿದೆ ಎಂದರು.
ನಿತೀಶ್ ಕುಮಾರ್ ಆರೋಗ್ಯದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸತೀಶ್, ಇದು ಸಂಪೂರ್ಣವಾಗಿ ಸುಳ್ಳು. ಅವರು ದಿನಕ್ಕೆ ಕನಿಷ್ಟ 10 ಸಭೆಗಳನ್ನು ನಡೆಸುತ್ತಾರೆ. ಅವರು ಅನಾರೋಗ್ಯದಿಂದಿದ್ದರೆ ಇದು ಸಾಧ್ಯವಿತ್ತೆ ಎಂದು ಪ್ರಶ್ನಸಿದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಅಬ್ಬರಕ್ಕೆ ವಿರೋಧ ಪಕ್ಷ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ನಲುಗಿದ್ದು, ಬಿಜೆಪಿ 89 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ ಸೀಟುಗಳಲ್ಲಿ ಸಮಾನ ಹಂಚಿಕೆ ಮಾಡಿಕೊಂಡಿದ್ದ ಜೆಡಿಯು ಕೂಡ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಸಮಬಲದ ಪೈಪೋಟಿ ನೀಡಿ 85 ಸ್ಥಾನ ಪಡೆದಿದೆ. ಇತರ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಕ್ಷ 19, ಹಿಂದೂಸ್ತಾನಿ ಅವಾಮ್ ಮೋರ್ಚಾ 5 ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳಲ್ಲಿ ಜಯಬೇರಿ ಬಾರಿಸಿವೆ.
ಈ ಚುನಾವಣೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನ್‌ ಪಾಲಿಗೆ ಕರಾಳ ಅಧ್ಯಾಯವಾಗಿದ್ದು, ಇದರೊಂದಿಗೆ ನೂತನ ಪಕ್ಷ ಸ್ಥಾಪಿಸಿ ದೇಶ್ಯಾದ್ಯಂತ ಸಂಚಲನ ಸೃಷ್ಠಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್​ರ ಜನ್​ ಸುರಾಜ್​ ಮೊದಲ ಚುನಾವಣೆಯಲ್ಲಿಯೇ ಹೀನಾಯ ಸೋಲು ಅನುಭವಿಸಿದೆ. ಆಡಳಿತಾರೂಢ NDA 202 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇದು 243 ಸದಸ್ಯ ಬಲದ ಬಿಹಾರದ ವಿಧಾನಸಭೆಯಲ್ಲಿ ನಾಲ್ಕನೇ ಮೂರು ಭಾಗದಷ್ಟು ಬಹುಮತವಾಗಿದೆ. 2010 ರ ವಿಧಾನಸಭಾ ಚುನಾವಣೆಯಲ್ಲಿಯೂ ಎನ್​ಡಿಎ ಮೈತ್ರಿಕೂಟ 206 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net