'14 ಪೀಕ್ಸ್' ಹೀರೋ ನಿಮ್ಸ್ ಡೈ ಇನ್ನಿಲ್ಲ: ಬ್ರಾಡ್​ ಪೀಕ್​​ನಲ್ಲಿ ಹಿಮಪಾತ; ಪರ್ವತಾರೋಹಣದ ದಂತಕಥೆ 'ನಿರ್ಮಲ್​ ಪುರ್ಜಾ' ದುರುಂತ ಅಂತ್ಯ! Nirmal Purja Died in Broad Peak

ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ
ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ
Published on

ಪ್ರಮುಖ ಮುಖ್ಯಾಂಶಗಳು

  • ನಿರ್ಮಲ್ 'ನಿಮ್ಸ್‌ಡೈ' ಪುರ್ಜಾ ನಿಧನ
  • ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ
  • ನೆಟ್‌ಫ್ಲಿಕ್ಸ್ '14 ಪೀಕ್ಸ್' ಹೀರೋ ಸಾಹಸಯಾತ್ರೆಯ ದುರಂತ ಅಂತ್ಯ
ನವದೆಹಲಿ: ಪರ್ವತಾರೋಹಣ ಲೋಕದ ದಂತಕಥೆ, ವಿಶ್ವದಾದ್ಯಂತ ಲಕ್ಷಾಂತರ ಸಾಹಸಿಗಳಿಗೆ ಸ್ಪೂರ್ತಿಯಾಗಿದ್ದ ನೇಪಾಳದ ಖ್ಯಾತ ಪರ್ವತಾರೋಹಿ ನಿರ್ಮಲ್ 'ನಿಮ್ಸ್‌ಡೈ' ಪುರ್ಜಾ ಅವರು ದುರಂತ (Nirmal Purja Died in Broad Peak) ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದ ಗಡಿಯಲ್ಲಿರುವ ವಿಶ್ವದ 12ನೇ ಅತಿ ಎತ್ತರದ ಪರ್ವತವಾದ 'ಬ್ರಾಡ್ ಪೀಕ್' ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರ ಸಾಹಸ ಕಂಪನಿಯಾದ ಎಲೈಟ್ ಎಕ್ಸ್‌ಪೆಡ್ ಅಧಿಕೃತವಾಗಿ ಖಚಿತಪಡಿಸಿದೆ.
ಕಳೆದ ಶುಕ್ರವಾರ, ಅಂದರೆ ಸುಮಾರು ಹತ್ತು ದಿನಗಳ ಹಿಂದೆ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಭಾರಿ ಹಿಮಪಾತದ ಬಳಿಕ ನಿಮ್ಸ್‌ಡೈ ಸೇರಿದಂತೆ ಆರು ಮಂದಿ ಪರ್ವತಾರೋಹಿಗಳು ಕಾಣೆಯಾಗಿದ್ದರು. ರಕ್ಷಣಾ ತಂಡಗಳು ತೀವ್ರ ಶೋಧ ನಡೆಸಿದರೂ ಯಾರನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈ ದುರಂತದಲ್ಲಿ ನಿಮ್ಸ್ ಮಾತ್ರವಲ್ಲದೆ, ಅವರ ವಿಶ್ವಾಸಾರ್ಹ ಜೊತೆಗಾರರಾದ ಪುರ್ ಬಹದ್ದೂರ್ ಗುರುಂಗ್ ಮತ್ತು ನಿಮಾ ಶೆರ್ಪಾ ಸೇರಿದಂತೆ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕಂಪನಿ ತೀವ್ರ ನೋವಿನಿಂದ ತಿಳಿಸಿದೆ.

ಯಾರು ಈ ನಿಮ್ಸ್‌ಡೈ? ಅಸಾಧಾರಣ ಸಾಧನೆಯ ಸರದಾರ!


ಸಾಮಾನ್ಯ ಯುವಕನಿಂದ ಜಾಗತಿಕ ಮಟ್ಟದ ಸಾಹಸಿ ನಾಯಕನಾಗಿ ಬೆಳೆದ ನಿರ್ಮಲ್ ಪುರ್ಜಾ ಅವರ ಜೀವನವೇ ಒಂದು ರೋಚಕ ಕಥೆ. ಬ್ರಿಟನ್‌ನ ಗೂರ್ಖಾ ಬ್ರಿಗೇಡ್ ಮತ್ತು ರಾಯಲ್ ಮೆರೈನ್‌ಗಳ ಮಾಜಿ ಸೈನಿಕರಾಗಿದ್ದ ನಿಮ್ಸ್, ನಂತರ ಪೂರ್ಣಾವಧಿ ಪರ್ವತಾರೋಹಣವನ್ನು ತಮ್ಮ ಉಸಿರಾಗಿಸಿಕೊಂಡರು.
2019 ರಲ್ಲಿ ಅವರು ಮಾಡಿದ 'ಪ್ರಾಜೆಕ್ಟ್ ಪಾಸಿಬಲ್' ಜಗತ್ತನ್ನೇ ಬೆರಗುಗೊಳಿಸಿತ್ತು. ಕೇವಲ 6 ತಿಂಗಳು ಮತ್ತು 6 ದಿನಗಳ ದಾಖಲೆಯ ಅವಧಿಯಲ್ಲಿ, ವಿಶ್ವದ 8,000 ಮೀಟರ್‌ಗಿಂತ ಹೆಚ್ಚಿನ ಎತ್ತರದ ಎಲ್ಲಾ 14 ಎತ್ತರದ ಶಿಖರಗಳನ್ನು ಏರಿ ನಿಮ್ಸ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಅಚ್ಚಳಿಯದೆ ಉಳಿಯುವಂತೆ ಮಾಡಿದ್ದರು.

ಅಲ್ಲದೆ, 2021 ರಲ್ಲಿ ಚಳಿಗಾಲದ ಕಠಿಣ ಪರಿಸ್ಥಿತಿಯಲ್ಲಿ ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ K2 ಪರ್ವತವನ್ನು ಮೊಟ್ಟಮೊದಲ ಬಾರಿಗೆ ಯಶಸ್ವಿಯಾಗಿ ಏರಿದ 10 ನೇಪಾಳಿ ಸಾಹಸಿಗಳ ಐತಿಹಾಸಿಕ ತಂಡದ ಮುಂಚೂಣಿಯಲ್ಲಿದ್ದವರು ಇವರ ಸಾಹಸಕ್ಕೆ ವಿಶ್ವವೇ ತಲೆಬಾಗಿತ್ತು.


ಸಾಕ್ಷ್ಯಚಿತ್ರದ ಮೂಲಕ ಮನೆಮಾತಾಗಿದ್ದ ನಿಮ್ಸ್!

ಅವರ ಈ ರೋಮಾಂಚಕಾರಿ ಸಾಹಸ ಯಶಸ್ಸಿನ ಕಥೆಯನ್ನು ಆಧರಿಸಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 14 ಪೀಕ್ಸ್: ನಥಿಂಗ್ ಈಸ್ ಇಂಪಾಸಿಬಲ್ (14 Peaks: Nothing Is Impossible) ಸಾಕ್ಷ್ಯಚಿತ್ರ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಡಾಕ್ಯುಮೆಂಟರಿ ಬಂದ ಬಳಿಕವಂತೂ ನಿಮ್ಸ್‌ಡೈ ಆಧುನಿಕ ಪರ್ವತಾರೋಹಣದ ಜಾಗತಿಕ ಐಕಾನ್ ಆಗಿ ಬದಲಾಗಿದ್ದರು.

ಕಣ್ಣೀರಲ್ಲಿ ಮುಳುಗಿದ ಸಾಹಸ ಲೋಕ!

ಜಗತ್ತು ತನ್ನ ಅತ್ಯುತ್ತಮ ಸಾಹಸಿಯೊಬ್ಬನನ್ನು ಕಳೆದುಕೊಂಡಿದೆ. ದೊಡ್ಡ ಕನಸುಗಳನ್ನು ಕಾಣಿ, ನಿಮ್ಮ ಮೇಲೆ ವಿಶ್ವಾಸವಿಡಿ ಮತ್ತು ಕಷ್ಟಗಳಿಗೆ ಎಂದಿಗೂ ತಲೆಬಾಗಬೇಡಿ ಎಂದು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟ ನಾಯಕ ಇಂದು ನಮ್ಮ ಜೊತೆಗಿಲ್ಲ ಎಂದು ಎಲೈಟ್ ಎಕ್ಸ್‌ಪೆಡ್ ಕಣ್ಣೀರಿಟ್ಟಿದೆ. ನಿಮ್ಸ್ ಅವರ ಸಾಹಸ ಪ್ರೀತಿ, ಸರಳತೆ ಮತ್ತು ಧೈರ್ಯ ಎಂದಿಗೂ ಅಳಿಯುವುದಿಲ್ಲ ಎಂದು ಕಂಪನಿ ಶ್ರದ್ಧಾಂಜಲಿ ಸಲ್ಲಿಸಿದೆ.
ಪರ್ವತಗಳ ಮೇಲಿನ ಅತಿಯಾದ ಪ್ರೀತಿಯೇ ಅವರ ಜೀವ ತೆಗೆದುಕೊಂಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಭಾವುಕರಾಗಿ ಪೋಸ್ಟ್ ಮಾಡುತ್ತಿದ್ದಾರೆ. ನಿಮ್ಸ್ ಅವರ ಅಕಾಲಿಕ ಅಗಲಿಕೆಯಿಂದ ಅವರ ಕುಟುಂಬ, ಸ್ನೇಹಿತರು ಮತ್ತು ಸಾಹಸಿಗಳ ಬಳಗದಲ್ಲಿ ತೀವ್ರ ಶೋಕ ಮಡುಗಟ್ಟಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಪಂಚದಾದ್ಯಂತದ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net