ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪುಣೆಯ ಮತ್ತೊಬ್ಬ ಉಪನ್ಯಾಸಕಿಯನ್ನು ಬಂಧಿಸಿದ ಸಿಬಿಐ | paper leak case

ಸಸ್ಯಶಾಸ್ತ್ರ ಉಪನ್ಯಾಸಕಿ ಮನೀಷಾ ಮಾಂಧರೆ
ಸಸ್ಯಶಾಸ್ತ್ರ ಉಪನ್ಯಾಸಕಿ ಮನೀಷಾ ಮಾಂಧರೆ
Published on
ನವದೆಹಲಿ: ಮೇ 3ರಂದು ನಡೆದಿದ್ದ 2026ರ ನೀಟ್-ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ(paper leak case) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ(ಎನ್‌ಟಿಎ) ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸಮಿತಿಯ ಭಾಗವಾಗಿದ್ದ ಮತ್ತೊಬ್ಬ ಉಪನ್ಯಾಸಕಿಯನ್ನು ಸಿಬಿಐ ಶನಿವಾರ(ಮೇ 16) ಬಂಧಿಸಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಸಸ್ಯಶಾಸ್ತ್ರ ಉಪನ್ಯಾಸಕಿ ಮನೀಷಾ ಮಾಂಧರೆ ಎಂದು ಗುರುತಿಸಲಾಗಿದೆ. ಸಿಬಿಐ ತನ್ನ ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ದೆಹಲಿಯಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ನೀಟ್ ಪರೀಕ್ಷೆಯ ಜೀವಶಾಸ್ತ್ರ ಪ್ರಶ್ನೆಗಳ ಸೋರಿಕೆಗೆ ಇವರೇ ಮಾಸ್ಟರ್ ಮೈಂಡ್ ಎನ್ನಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪಿ.ವಿ.ಕುಲಕರ್ಣಿ ಮತ್ತು ಇತರರ ವಿಚಾರಣೆಯ ಆಧಾರದ ಮೇಲೆ ಮಾಂಧರೆ ಅವರನ್ನು ಬಂಧಿಸಲಾಗಿದೆ. ಪುಣೆಯ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಯ ಮೂಲಗಳ ಪ್ರಕಾರ, ಅವರು ಕಳೆದ ಐದರಿಂದ ಆರು ವರ್ಷಗಳಿಂದ NTA ಪರವಾಗಿ NEETಗಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಿದೆ.
ಸಿಬಿಐ ಪ್ರಕಾರ, ಮಾಂಧರೆಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಶ್ನೆ ಪತ್ರಿಕೆಗಳ ಸಿದ್ದಪಡಿಸುವ ಜವಾಬ್ದಾರಿ ಇತ್ತು. ಏಪ್ರಿಲ್ 2026ರಲ್ಲಿ ಪುಣೆಯಲ್ಲಿ ನಡೆದ ರಹಸ್ಯ ತರಬೇತಿ ತರಗತಿಗಳ ಸಮಯದಲ್ಲಿ ನೀಟ್ ಆಕಾಂಕ್ಷಿಗಳನ್ನು ಆಯ್ಕೆ ಮಾಡಲು ಅವರು ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದೆ.
ಸೋರಿಕೆಯಾದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಮಾಂಧಾರೆ ಅವರೇ ನಿರ್ದೇಶಿಸಿದ್ದಾರೆ ಮತ್ತು ಲಕ್ಷಾಂತರ ರೂಪಾಯಿಗಳನ್ನು ಶುಲ್ಕವಾಗಿ ಪಡೆದಿದ್ದಾರೆ ಎನ್ನಲಾಗಿದೆ. ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಂದ ವಿವಿಧ ಪ್ರಶ್ನೆಗಳನ್ನು ಸೂಚಿಸಿದ್ದು, ಅವುಗಳನ್ನು ನೋಟ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಪ್ರಶ್ನೆಗಳಲ್ಲಿ ಹೆಚ್ಚಿನವು ಮೇ 3ರಂದು ನಡೆದ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಪ್ರಶ್ನೆಗಳಿಗೆ ಹೊಂದಿಕೆಯಾಗಿವೆ ಎಂದು ಸಿಬಿಐ ತಿಳಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net