ಭಾರತದಲ್ಲಿ ಮುಸ್ಲಿಮರೇ ಬೇಡ ಎನ್ನುವವರು ಹಿಂದೂಗಳೇ ಅಲ್ಲ: ನ್ಯೂಯಾರ್ಕ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ನ್ಯೂಯಾರ್ಕ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
ನ್ಯೂಯಾರ್ಕ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವರು ನಿಜವಾದ ಹಿಂದೂ ಅಲ್ಲ
  • 'ಹಿಂದೂ ರಾಷ್ಟ್ರ' ಎಂಬ ಪರಿಕಲ್ಪನೆಯು ಮುಸ್ಲಿಮರನ್ನು ಎಂದಿಗೂ ಹೊರತುಪಡಿಸುವುದಿಲ್ಲ
  • ನ್ಯೂಯಾರ್ಕ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
ಅಮೆರಿಕ: ಭಾರತದ ಶಕ್ತಿಯು ದೇಶದ ವೈವಿಧ್ಯತೆ, ವಿವಿಧ ಧರ್ಮಗಳು ಮತ್ತು ವಿಭಿನ್ನ ಜೀವನಶೈಲಿಗಳನ್ನು ಗೌರವಿಸುವುದರಲ್ಲಿದೆ. 'ಹಿಂದೂ ರಾಷ್ಟ್ರ' ಎಂಬ ಕಲ್ಪನೆಯು ಮುಸ್ಲಿಮರನ್ನು ಬಿಟ್ಟು ಹೇಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ 'ಒನ್​ ವರ್ಲ್ಡ್​, ಒನ್​ ಹ್ಯೂಮ್ಯಾನಿಟಿ' (One World, One Humanity) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2018ರಲ್ಲಿ ನಡೆದ ಘಟನೆಯೊಂದನ್ನು ತಮ್ಮ ಭಾಷಣದಲ್ಲಿ ಮೆಲುಕು ಹಾಕಿದರು. ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರ ಎಂಬ ಕಲ್ಪನೆಯು ಮುಸ್ಲಿಮರನ್ನು ಭಾರತದಿಂದ ಓಡಿಸುವುದೇ ಎಂದು ಮುಸ್ಲಿಂ ಸಮುದಾಯದ ಸದಸ್ಯರು ನನ್ನನ್ನು ಪ್ರಶ್ನಿಸಿದ್ದರು. ಇದಕ್ಕೆ ನಾನು, 'ಖಂಡಿತ ಇಲ್ಲ, ಆ ರೀತಿ ಹೇಳಿದರೆ ಅದು ನಿಜವಾದ ಹಿಂದುತ್ವವೇ ಅಲ್ಲ' ಎಂದು ಉತ್ತರಿಸಿದ್ದೆ" ಎಂದರು.
"ಯಾರಾದರೂ ಒಬ್ಬ ಹಿಂದೂ, ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸಿದರೆ, ಆತ ನಿಜವಾದ ಹಿಂದೂವೇ ಅಲ್ಲ. ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವ ಮುನ್ನ, ಎಲ್ಲ ಪಂಥಗಳ ಹಾದಿಯೂ ಒಂದೇ ದೇವರತ್ತ ಸಾಗುತ್ತದೆ ಎಂಬುದನ್ನು ಮೊದಲು ಬಲವಾಗಿ ನಂಬಬೇಕು" ಎಂದು ಪ್ರತಿಪಾದಿಸಿದರು.

‘ಸತ್ಯ ಒಂದೇ, ಧರ್ಮಗಳು ಬೇರೆ’

ಮಾನವೀಯತೆಯ ಏಕತೆಯನ್ನು ಒತ್ತಿ ಹೇಳಿದ ಭಾಗವತ್, ಧರ್ಮಕ್ಕಿಂತ ಸತ್ಯ ಪ್ರಮುಖ. ಧರ್ಮಗಳು ವಿಭಿನ್ನವಾಗಿರಬಹುದು. ಆದರೆ, ಮಾನವೀಯತೆ ಒಂದೇ. ಸತ್ಯ ಒಂದೇ ಆಗಿದ್ದು, ಇಡೀ ಮಾನವಕುಲ ಆ ಸತ್ಯದ ಉತ್ಪನ್ನವಾಗಿದೆ. ಧರ್ಮಗಳ ಅಂತಿಮ ಉದ್ದೇಶ ಸತ್ಯವನ್ನು ಹುಡುಕುವುದಾಗಿದೆ. ನಾನು ಬೆಳಕಿನತ್ತ ಬೆರಳು ತೋರಿಸಿದಾಗ, ನೀವು ಮೊದಲು ನನ್ನ ಬೆರಳನ್ನು ನೋಡಿ ನಂತರ ಬೆಳಕನ್ನು ನೋಡುತ್ತೀರಿ. ಆದರೆ, ನೀವು ನನ್ನ ಬೆರಳನ್ನೇ ನೋಡುತ್ತಾ ಕುಳಿತರೆ, ನಿಮಗೆ ಬೆಳಕು ಎಂದಿಗೂ ಕಾಣಿಸುವುದಿಲ್ಲ ಎಂಬ ಉದಾಹರಣೆ ಕೊಟ್ಟರು.

'ವಸುಧೈವ ಕುಟುಂಬಕಂ'

ವಿದೇಶಿ ಆಕ್ರಮಣಗಳಿಂದಾಗಿ ಭಾರತ ಅನೇಕ ವಸ್ತುಗಳನ್ನು ಕಳೆದುಕೊಂಡಿದ್ದರೂ, ಇಡೀ ಜಗತ್ತನ್ನೇ ಒಂದು ಕುಟುಂಬವಾಗಿ ನೋಡುವ ಸಂಪ್ರದಾಯ ಇಂದಿಗೂ ನಮ್ಮಲ್ಲಿ ಜೀವಂತವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಳ್ಳುವುದನ್ನು ಆರ್‌ಎಸ್‌ಎಸ್ ತನ್ನ ಕರ್ತವ್ಯ ಎಂದು ಭಾವಿಸುತ್ತದೆ. ಪ್ರತಿಯೊಬ್ಬರಿಗೂ ಆಶ್ರಯ ನೀಡಿದ ಇತಿಹಾಸ ಭಾರತಕ್ಕಿದೆ ಎಂದರು.
ರಾಜಕೀಯ ಕ್ಷೇತ್ರವನ್ನು ಟೀಕಿಸಿದ ಅವರು, "ಇಂದಿನ ರಾಜಕೀಯವು ಸ್ವಾರ್ಥದ ಆಟವಾಗಿದೆ. ಎಲ್ಲಿ 'ನಾನು' ಮತ್ತು 'ನನ್ನದು' ಎಂಬ ಭಾವನೆ ಇರುತ್ತದೆಯೋ, ಅಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಿಂತ ಜಾಗತಿಕ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಬದಲಾವಣೆ ಸಮಾಜದಿಂದಲೇ ಆರಂಭವಾಗಬೇಕು ಎಂದು ಕರೆ ನೀಡಿದರು.

2018ರ ಭಾಷಣ, ಆರ್‌ಎಸ್‌ಎಸ್ ಚಿಂತನೆ

2018ರ ದೆಹಲಿಯ ಭಾಷಣದ ಬಳಿಕ ಆರ್‌ಎಸ್‌ಎಸ್, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳೊಂದಿಗೆ ಸತತ ಸಂವಾದ ನಡೆಸುತ್ತಿದೆ ಎಂದ ಭಾಗವತ್​, ಸಂಘವು ತನ್ನ ಸೇವಾ ಚಟುವಟಿಕೆಗಳಲ್ಲಿ ಯಾವುದೇ ಧಾರ್ಮಿಕ ತಾರತಮ್ಯ ಮಾಡುವುದಿಲ್ಲ. ಏಕೆಂದರೆ, ಕಾಲಕ್ರಮೇಣ ಸಂಘದ ಚಿಂತನೆಗಳು ವಿಕಸನಗೊಂಡಿವೆ. ಹಿಂದುತ್ವವು ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಗೌರವಿಸಿ ಎಲ್ಲರನ್ನೂ ಒಂದಾಗಿ ಸ್ವೀಕರಿಸುವ ಪರಿಕಲ್ಪನೆಯಾಗಿದೆ ಎಂದು ಮತ್ತೊಮ್ಮೆ ಸಾರಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net