ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿಯಲ್ಲಿ ಟಿಎಂಸಿ ರೆಬಲ್ ಸಂಸದರ ವಿಲೀನ: ಕಾಕೋಲಿ ಘೋಷ್ ದಸ್ತಿದಾರ್ ಹೇಳಿದ್ದೇನು? | Kakoli Ghosh Dastidar

ಟಿಎಂಸಿ ಬಂಡಾಯ ಸಂಸದರು ಸ್ಪೀಕರ್ ಓಂ ಬಿರ್ಲಾ ಭೇಟಿಯಾಗಿರುವುದು.
ಟಿಎಂಸಿ ಬಂಡಾಯ ಸಂಸದರು ಸ್ಪೀಕರ್ ಓಂ ಬಿರ್ಲಾ ಭೇಟಿಯಾಗಿರುವುದು.
Published on
ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಬಿಕ್ಕಟ್ಟಿಗೆ ಮೇಜರ್ ಟ್ವಿಸ್ಟ್ ದೊರೆತಿದ್ದು, ಪಕ್ಷದ ವಿರುದ್ಧ ಬಂಡಯವೆದ್ದಿದ್ದ ಎಲ್ಲಾ 20 ಸಂಸದರು, ಭಾನುವಾರ(ಜೂ. 14) ಅಸ್ಸಾಂ ಮೂಲದ ಅಷ್ಟಾಗಿ ಗೊತ್ತಿಲ್ಲದ ಪ್ರಾದೇಶಿಕ ಪಕ್ಷವಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿಯಲ್ಲಿ ವಿಲೀನವಾಗುವುದಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಒಕ್ಕೂಟಕ್ಕೆ ತಮ್ಮ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದು, ಜೊತೆಗೆ ಲೋಕಸಭೆಯಲ್ಲಿ ತಮಗೆ ಪ್ರತ್ಯೇಕ ಆಸನ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಸ್ಪೀಕರ್​ಗೆ ಮನವಿ ಪತ್ರ ಕೊಟ್ಟ ಬಳಿಕ ಮಾತನಾಡಿರುವ ಕಾಕೋಲಿ ಘೋಷ್ ದಸ್ತಿದಾರ್, ತೃಣಮೂಲ ಕಾಂಗ್ರೆಸ್​ನಿಂದ ಆಯ್ಕೆಯಾದ ನಾವು ಇಪ್ಪತ್ತು ಸಂಸದರು, ಸ್ಪೀಕರ್ ಅವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವಿನಂತಿಸಿ ಪತ್ರವನ್ನು ಸಲ್ಲಿಸಿದ್ದೇವೆ. ನಾವೆಲ್ಲರೂ ರಾಷ್ಟ್ರೀಯತಾವಾದಿ ನಾಗರಿಕ ಪಕ್ಷದೊಂದಿಗೆ ವಿಲೀನಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಮುಂದುವರೆದು, ನಮಗೆ ಮೂರನೇ ಎರಡರಷ್ಟು ಬಹುಮತವಿದೆ. ನಾವು ಎನ್‌ಡಿಎಯ ಭಾಗವಾಗಿರುತ್ತೇವೆ. ಮತ್ತು ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇನ್ನೂ ಹಿರಿಯ ಸಂಸದ ಸುದೀಪ್ ಬಂಡೋಪಾದ್ಯಯ ಮಾತನಾಡಿ, ನಾವು ರಾಷ್ಟ್ರೀಯತಾವಾದಿ ನಾಗರಿಕ ಪಕ್ಷದೊಂದಿಗೆ ವಿಲೀನಗೊಳ್ಳುತ್ತೇವೆ. ಅದು ಪ್ರಾದೇಶಿಕ ಪಕ್ಷ. ಪಕ್ಷದ ಮೂರನೇ ಎರಡರಷ್ಟು ಸದಸ್ಯರೊಂದಿಗೆ ಹೊರ ಬಂದಾಗ ಮೊದಲ ದಿನವೇ ಆ ಪಕ್ಷದ ಹೆಸರನ್ನು ಕೇಳಲು ಸಾಧ್ಯವಿಲ್ಲ. ಜುಲೈನಲ್ಲಿ, ತೃಣಮೂಲದಿಂದ ನಮಗೆ ಮೂರನೇ ಎರಡರಷ್ಟು ಬಹುಮತ ಇರುವುದರಿಂದ ನಮಗೆ ತೃಣಮೂಲ ಹೆಸರು ನೀಡುವಂತೆ ಬೇಡಿಕೆ ಇಡುತ್ತೇವೆ. ಬಳಿಕ ನ್ಯಾಯಾಲಯ ಅದನ್ನು ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.

ಬಂಡಾಯ ಗುಂಪಿನಿಂದ ದ್ರೋಹ

ಇನ್ನೂ ಟಿಎಂಸಿ ರೆಬಲ್ ಗುಂಪಿನ ವಿರುದ್ಧ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಮದನ್ ಮಿತ್ರಾ, ಬಂಡಾಯ ಗುಂಪು ತೃಣಮೂಲ ಕಾಂಗ್ರೆಸ್‌ಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದ್ದಾರೆ.
ಅವರು ತೃಣಮೂಲ ಪಕ್ಷದ ಚಿಹ್ನೆಯಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಗೆದ್ದು, ಪಕ್ಷವನ್ನು ಬಲಪಡಿಸಲು ಬಯಸುವುದಾಗಿ ಹೇಳಿದ್ದರು. ಈಗ ಪಕ್ಷದ ವಿರುದ್ಧ ಬಂಡಾಯವೆದ್ದು ವಂಚನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net