ಬಹುಶಃ ಕೇಂದ್ರ ಶಿಕ್ಷಣ ಸಚಿವರಿಗೆ ರಾಜೀನಾಮೆ ಪತ್ರ ಬರೆಯುವುದೇಗೆಂದು ಗೊತ್ತಿಲ್ಲ: ಧರ್ಮೇಂದ್ರ ಪ್ರಧಾನ್ ವಿರುದ್ಧ ಮಹುವಾ ವಾಗ್ದಾಳಿ | Mahua moitra

ಧರ್ಮೇಂದ್ರ ಪ್ರಧಾನ್ ಮತ್ತು ಮಹುವಾ ಮೊಯಿತ್ರಾ
ಧರ್ಮೇಂದ್ರ ಪ್ರಧಾನ್ ಮತ್ತು ಮಹುವಾ ಮೊಯಿತ್ರಾ
Published on
ನವದೆಹಲಿ: ನೀಟ್ ಪರೀಕ್ಷೆ ಅಕ್ರಮ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ ಮಾಡ್ತಿರುವ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ(Mahua moitra), ಬಹುಶಃ ಶಿಕ್ಷಣ ಸಚಿವರಿಗೆ ರಾಜೀನಾಮೆ ಪತ್ರ ಬರೆಯುವುದು ಹೇಗೆಂದು ತಿಳಿದಿಲ್ಲ ಅನ್ನಿಸುತ್ತೆ ಎಂದು ಕಿಡಿಕಾರಿದ್ದಾರೆ.
ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಚಲೋ ಸಂಸತ್ ಯಾತ್ರೆಯನ್ನು ತಡೆಯಲು ಜಂತರ್ ಮಂತರ್​ನಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಬಳಿಕ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಬಹುಶಃ ಶಿಕ್ಷಣ ಸಚಿವರಿಗೆ ರಾಜೀನಾಮೆ ಪತ್ರ ಬರೆಯುವುದು ಹೇಗೆಂದು ತಿಳಿದಿಲ್ಲದಿರಬಹುದು. ಆರ್‌ಎಸ್‌ಎಸ್ ನಿಮಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುವುದು ಹೇಗೆಂದು ಮಾತ್ರ ಕಲಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕ್ಷಮೆ ಕೇಳಿದ ದೀಪ್ಕೆ

ಚಲೋ ಸಂಸತ್ ಯಾತ್ರೆ ವೇಳೆ ಪೊಲೀಸ್ ಲಾಟಿ ಚಾರ್ಜ್​ ಸಮಯದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾದ ಬೆಂಬಲಿಗರಿಗೆ, ವಿಶೇಷವಾಗಿ ಮಹಿಳಾ ಪ್ರತಿಭಟನಾಕಾರರಿಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕ್ಷಮೆಯಾಚಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ದೀಪ್ಕೆ, ನಮ್ಮ ಎಲ್ಲಾ ಬೆಂಬಲಿಗರಿಗೆ, ವಿಶೇಷವಾಗಿ ಪೊಲೀಸ್ ಅಧಿಕಾರಿಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಹುಡುಗಿಯರಿಗೆ ನಾನು ಕ್ಷಮೆಯಾಚಿಸುತ್ತೇನೆ. ಒಬ್ಬ ಧರ್ಮೇಂದ್ರ ಪ್ರಧಾನ್ ಅವರನ್ನು ರಕ್ಷಿಸಲು ಸರ್ಕಾರ ಬಲಪ್ರಯೋಗ ಮಾಡಲು ಸಿದ್ಧವಾಗಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವಿಗೆ ಶಿಕ್ಷಣ ಸಚಿವರೇ ಕಾರಣ ಎಂದು ಕಿಡಿಕಾರಿದ್ದಾರೆ.
ಏತನ್ಮಧ್ಯೆ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 24ನೇ ದಿನಕ್ಕೆ ಕಾಲಿಟ್ಟಿದೆ ಎಂದು ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಹೇಳಿದ್ದಾರೆ. ಮತ್ತು ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಗುಂಪಿನ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net