ಬೆಟ್ಟದಿಂದ ಬಿದ್ದು ಮೂವರು ಸಾವು: ಘೋರ ದುರಂತ ಬೆನ್ನಲ್ಲೇ ವೈರಲ್ ಆಯ್ತು ಅಮ್ಮ-ಮಗನ ಭಾವುಕ ವಿಡಿಯೋ

ದುರಂತ ಅಂತ್ಯ ಕಂಡ ಕುನಾಲ್​ ಮತ್ತು ಅವರ ತಾಯಿ ಕ್ಷಣ
ದುರಂತ ಅಂತ್ಯ ಕಂಡ ಕುನಾಲ್​ ಮತ್ತು ಅವರ ತಾಯಿ ಕ್ಷಣ
Published on

ಪ್ರಮುಖ ಮುಖ್ಯಾಂಶಗಳು

  • ಐಫೋನ್​ ಕಂತು ಕಟ್ಟಲು ಹಣ ಕೊಡಲಿಲ್ಲವೆಂದು ಜಗಳ
  • ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪುತ್ರನ ಬೆದರಿಕೆ
  • ತಂದೆ-ತಾಯಿ ಬೇಡಿಕೊಂಡರೂ ಮಾತು ಕೇಳಲಿಲ್ಲ ಪುತ್ರ
  • ಸಾವಿನ 15 ನಿಮಿಷಗಳಲ್ಲಿ, ಮೂವರು ಬೆಟ್ಟದಿಂದ ಕೆಳಗೆ ಬಿದ್ದು ದುರಂತ ಸಾವು
ಮಹಾರಾಷ್ಟ್ರ: ಮೊನ್ನೆ ಮೊನ್ನೆಯಷ್ಟೇ ಬೆಟ್ಟದ ಅಂಚಿಗೆ ತಲುಪಿ ನಾನು ಬದುಕುವುದಿಲ್ಲ! ನನಗೆ ಜೀವಂತವಾಗಿರಲು ಇಷ್ಟವಿಲ್ಲ ಎನ್ನುತ್ತಿದ್ದ ಕುನಾಲ್ ಚಂದವಾಡೆ (18), ಸತತ ಮೂರು ಗಂಟೆಗೂ ಹೆಚ್ಚು ಕಾಲ ಪಾಲಕರು ಮತ್ತು ಇಡೀ ಗ್ರಾಮಸ್ಥರನ್ನು ಗಾಬರಿಗೊಳಿಸಿದ್ದಲ್ಲದೇ, ತನ್ನ ಸಾವಿನಲ್ಲಿ ತಂದೆ-ತಾಯಿಯನ್ನೂ ಬಲಿ ಪಡೆದ ದಾರುಣ ಘಟನೆಗೆ ಅನೇಕರು ಕಂಬನಿ ಮಿಡಿದಿದ್ದಾರೆ.
ಬೆಟ್ಟದ ತುದಿಯನ್ನು ತಲುಪಿ, ನೀವ್ಯಾರು ನನ್ನ ಹತ್ತಿರ ಬರಬೇಡಿ ಎಂದ ಯುವಕ, ತಂದೆ-ತಾಯಿ ಎಷ್ಟೇ ಬೇಡಿಕೊಂಡರೂ ಕೆಳಗಿಳಿಯಲು ಒಪ್ಪಲಿಲ್ಲ. ಸತತ ಮೂರು ಗಂಟೆಗಳ ಕಾಲ ಗ್ರಾಮಸ್ಥರು ಮತ್ತು ಯುವಕನ ಪಾಲಕರು, ದುಡುಕಿ ಇಂತಹ ನಿರ್ಧಾರ ಕೈಗೊಳ್ಳಬೇಡ. ನಿನ್ನ ಭವಿಷ್ಯ ಮತ್ತು ನಮ್ಮ ಬಗ್ಗೆಯೂ ಯೋಚಿಸು ಎಂದು ಕೈಮುಗಿದು ಕೇಳಿಕೊಂಡರೂ ಯಾವುದೇ ಕಾರಣಕ್ಕೂ ಸಾಯಲು ಇಟ್ಟಿರುವ ಹೆಜ್ಜೆಯನ್ನು ಹಿಂದಿಡುವುದಿಲ್ಲ ಎಂದು ಬೆದರಿಸಿದ. ಸಾವಿನ ಕೊನೆಯ 15 ನಿಮಿಷಗಳಲ್ಲಿ ನಡೆದ ಹೈಡ್ರಾಮಾ ಇದೀಗ ಮೂವರ ದುರಂತ ಅಂತ್ಯಕ್ಕೆ ಕಾರಣವಾಗಿದೆ ಎಂಬುದು ನಿಜಕ್ಕೂ ಎಂಥವರ ಮನ ಕಲಕುವಂತಿದೆ.

ಐಫೋನ್​ ಕಂತಿನ ವಿಚಾರಕ್ಕೆ ಮನಸ್ತಾಪ

ಕೆಲವು ದಿನಗಳ ಹಿಂದೆಯಷ್ಟೇ ಹೊಸ ಹಾಗೂ ದುಬಾರಿ ಐಫೋನ್ ಮೊಬೈಲ್‌ ಅನ್ನು ಇಎಮ್‌ಐ (ಕಂತು) ಮೂಲಕ ಖರೀದಿ ಮಾಡಿದ್ದ ಕುನಾಲ್​, ತನಗೆ ಕಂತುಗಳನ್ನು ಕಟ್ಟಲು ಹಣ ಕೊಡುವಂತೆ ತಂದೆ ಮತ್ತು ತಾಯಿಯೊಡನೆ ಜಟಾಪಟಿ ನಡೆಸಿದ್ದ. ಇದಕ್ಕೆ ಒಪ್ಪದ ಆತನ ತಾಯಿ ಸಂಗೀತಾ, ಯಾವುದೇ ಕಾರಣಕ್ಕೂ ಬೇಡ ಅರ್ಥ ಮಾಡಿಕೋ ಎಂದು ಮನವೋಲಿಸಲು ಪ್ರಯತ್ನಿಸಿದ್ದರು. ಆದ್ರೆ, ಇದ್ಯಾವುದಕ್ಕೂ ಕುನಾಲ್​ ಒಪ್ಪಿಲ್ಲ.
ಮಗನ ಬಗ್ಗೆ ತುಂಬ ಚಿಂತಿಸಿದ ತಂದೆ ಮುರುಳಿಧರ್ (48) ಮತ್ತು ಸಂಗೀತಾ, ಎಷ್ಟೇ ಬಾರಿ ಅರ್ಥ ಮಾಡಿಕೊಳ್ಳುವಂತೆ ಕೇಳಿಕೊಂಡರೂ ಆತ ಒಪ್ಪದೆ, ವಿಪರೀತ ಹಠ ಮಾಡಿದ್ದಾನೆ. ಯಾವಾಗ ತಂದೆ-ತಾಯಿ ಇಬ್ಬರೂ ತನ್ನ ಮಾತಿಗೆ ಒಪ್ಪಿಗೆ ನೀಡಲಿಲ್ಲ ಎಂಬುದು ಗೊತ್ತಾಯಿತೋ, ಆ ಕ್ಷಣವೇ ಕೊಹ್ದ್ಯ ಡೊಂಗರ್ ಬೆಟ್ಟವೇರಿ, ಅಲ್ಲಿಂದ ಬಿದ್ದು ಸಾಯುವುದಾಗಿ ಬೆದರಿಕೆ ಹಾಕಿದ್ದ. ಇಲ್ಲಿಯೇ, ನಡೆದಿದ್ದು ಯಾರು ಊಹಿಸದ ಈ ಘೋರ ದುರಂತ.

ಸಾವಿನ ಕೊನೆಯ 15 ನಿಮಿಷ

ಬೆಳಗ್ಗೆ 10 ಗಂಟೆಯ ಸುಮಾರಿಗೆ ಬೆಟ್ಟ ಹತ್ತಿ, ಸಾಯುವುದಾಗಿ ಎಲ್ಲರ ಮುಂದೆ ಕೂಗಾಡಿದ ಯುವಕ, ಗ್ರಾಮಸ್ಥರು ಮತ್ತು ತಂದೆ-ತಾಯಿ ಭವಿಷ್ಯ ಹಾಳು ಮಾಡಿಕೊಳ್ಳಬೇಡ, ನಮ್ಮ ಬಗ್ಗೆಯೂ ಯೋಚಿಸು ಎಂದು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸಾಯುವ ನಿರ್ಧಾರದಿಂದ ಹಿಂದೇಟು ಹಾಕಲಿಲ್ಲ. ಸಾವಿನ ಕೊನೆಯ 15 ನಿಮಿಷದಲ್ಲಿ, ಎಲ್ಲಿ ನಮ್ಮ ಮಗ ಸತ್ತು ಹೋಗಿಬಿಡುತ್ತಾನೆ ಎಂಬ ಭಯದಿಂದ ಪಾಲಕರಿಬ್ಬರೂ ಬೆಟ್ಟವನ್ನು ಹತ್ತಿದ್ದಾರೆ. ಈ ವೇಳೆ, ಮಗನನ್ನು ಕಾಪಾಡಲು ತುತ್ತ ತುದಿಗೆ ಹೋದ ಮುರುಳಿಧರ್​, ಆತನ ಕೈಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇ ಆದರೂ ಯುವಕನ ಕಾಲು ಜಾರಿದ ಪರಿಣಾಮ ಇಬ್ಬರೂ ಕೆಳಗೆ ಬಿದ್ದು ಸಾವನ್ನಪ್ಪಿದರು.
ಗಂಡ ಮತ್ತು ಮಗ ಇಬ್ಬರೂ ಕೆಳಗೆ ಬಿದ್ದದ್ದನ್ನು ಕಂಡು ಗಾಬರಿಯಿಂದ ಚೀರಾಡಿದ ತಾಯಿಯೂ ಬೆಟ್ಟದ ಕೆಳಗೆ ಜಿಗಿದು ಸಾವಿಗೀಡಾದ ದುರಂತ ಒಂದು ನಿಮಿಷ ಸ್ಥಳೀಯರನ್ನು ಮೌನಕ್ಕೆ ಶರಣಾಗಿಸಿತು. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ಮೂವರ ಮೃತದೇಹಗಳನ್ನು ವಶಪಡಿಸಿಕೊಂಡು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಅಮ್ಮ-ಮಗನ ಭಾವುಕ ಕ್ಷಣ ವೈರಲ್​

ಘಟನಾ ಸ್ಥಳದಲ್ಲೇ ತಂದೆ, ತಾಯಿ ಮತ್ತು ಮಗ ಮೂವರೂ ದುರಂತ ಸಾವಿಗೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕುನಾಲ್​ ಮತ್ತು ಸಂಗೀತಾ ಅವರು ಕಳೆದ ಭಾವುಕ ಕ್ಷಣಗಳ ವಿಡಿಯೋಗಳು ಹರಿದಾಡುತ್ತಿದೆ. ಒಂದರಲ್ಲಿ, ತಾಯಿ ಜತೆ ಟೀ ಅಥವಾ ಕುಫಿ ಕುಡಿಯುತ್ತಿದ್ದರೆ, ಇನ್ನೊಂದರಲ್ಲಿ ಸಂಗೀತಾ ಅವರ ಪಾದವನ್ನು ತೊಳೆಯುತ್ತಿರುವ ದೃಶ್ಯ ನೋಡುಗರ ಹೃದಯ ಹಿಂಡುವಂತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net