ಕಾನ್ಪುರ ಲಂಬೋರ್ಘಿನಿ ಅಪಘಾತ: ತಂಬಾಕು ಉದ್ಯಮಿಯ ಮಗ ಶಿವಂ ಮಿಶ್ರಾ ಬಂಧನ | Kanpur Lamborghini Accident

ಆರೋಪಿ ಶಿವಂ ಮಿಶ್ರಾನನ್ನು ಬಂಧಿಸಿರುವ ಪೊಲೀಸರು, ಅಫಘಾತದ ಚಿತ್ರ
ಆರೋಪಿ ಶಿವಂ ಮಿಶ್ರಾನನ್ನು ಬಂಧಿಸಿರುವ ಪೊಲೀಸರು, ಅಫಘಾತದ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ನಡೆದಿದ್ದ ಕಾನ್ಪುರ ಲಂಬೋರ್ಘಿನಿ ಅಪಘಾತ
  • ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಬಂಧನ
  • ನ್ಯಾಯಾಲಯದಲ್ಲಿ ವ್ಯತಿರಿಕ್ತಿ ಹೇಳಿಕೆ ನೀಡಿದ್ದ ಚಾಲಕ ಮೋಹನ್​
  • ಮೋಹನ್​ ಹೇಳಿಕೆಯನ್ನು ತಿರಸ್ಕರಿಸಿದ್ಧ ನ್ಯಾಯಾಲಯ
ಕಾನ್ಪುರ: ಇತ್ತೀಚೆಗೆ ನಡೆದಿದ್ದ ಕಾನ್ಪುರ ಲಂಬೋರ್ಘಿನಿ ಅಪಘಾತ (Kanpur Lamborghini Accident) ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಗುರುವಾರ (ಫೆ.12) ಬಂಧಿಸಲಾಗಿದೆ.
ಕಾನ್ಪುರದ ವಿಐಪಿ ರಸ್ತೆಯಲ್ಲಿ ಫೆಬ್ರವರಿ 8 ರಂದು ನಡೆದ ಅಪಘಾತದ ನಂತರ ಉದ್ಯಮಿಯ ಮಗನನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳು ಮತ್ತು ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿರುವ ನಡುವೆ ಶಿವಂ ಮಿಶ್ರಾರನ್ನು ಬಂಧಿಸಲಾಗಿದೆ.
ಗುರುವಾರ ಬೆಳಿಗ್ಗೆ ಆರ್ಯ ನಗರದಲ್ಲಿರುವ ಅವರ ನಿವಾಸದ ಹೊರಗೆ ಶಿವಂ ಅವರನ್ನು ಬಂಧಿಸಲಾಯಿತು ಮತ್ತು ನಂತರ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಜೆಸಿಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಶಿವಂ ಮಿಶ್ರಾ ಬಂಧನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನ್ಪುರದ ಕೇಂದ್ರ ವಿಭಾಗದ ಡಿಸಿಪಿ ಅತುಲ್ ಕುಮಾರ್ ಶ್ರೀವಾಸ್ತವ್, ಶಿವಂ ಕಾನ್ಪುರದಲ್ಲಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನಲೆ ನಾವು ಐದು ತಂಡಗಳನ್ನು ರಚಿಸಿಕೊಂಡು ಅವರನ್ನು ಬಂಧಿಸಿದ್ದೇವೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
ಅಪಘಾತ ಮತ್ತು ಪರಿಣಾಮಗಳು
ಫೆಬ್ರವರಿ 8 ರಂದು, ವಿಐಪಿ ರಸ್ತೆಯಲ್ಲಿ ವೇಗವಾಗಿ ಬಂದ ಲಂಬೋರ್ಘಿನಿ ಆರು ಜನರ ಮೇಲೆ ಹರಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅಫಘಾತಕ್ಕೆ ಕಾರಣವಾದ ಕಾರು ಶಿವಂ ಮಿಶ್ರಾ ಅವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿತ್ತು. ಅಪಘಾತದ ನಂತರ, ಪೊಲೀಸರು ಪ್ರಕರಣವನ್ನು ನಿರ್ವಹಿಸಿದ ರೀತಿ ಅನುಮಾನಕ್ಕೆ ಕಾರಣವಾಗಿತ್ತು.
ಕಾರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಕಾರನ್ನು ಮುಚ್ಚಿಟ್ಟು ಅದರ ಕಾವಲಿಗೆ ಬೌನ್ಸರ್‌ಗಳನ್ನು ಸಹ ನೇಮಿಸಿದ್ದರು ಎಂದು ಕೇಳಿಬಂದಿತ್ತು. ಆರೋಪಿಯು ಪ್ರಭಾವಿ ವ್ಯಕ್ತಿಯ ಮಗನಾಗಿದ್ದ ಕಾರಣ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ ಎಂಬ ವದಂತಿ ಹಬ್ಬಿತ್ತು.
ಈ ವದಂತಿಗೆ ಪೂರಕ ಎಂಬಂತೆ ಆರೋಪ ಕೇಳಿಬಂದ ಕೂಡಲೇ ಪೊಲೀಸರು ಶಿವಂ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಿಲ್ಲ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತರುವಾಯ ಅನಾಮದೇಯ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಯಿತು. ಈ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ ನಂತರ ಪೊಲೀಸರು ಶಿವಂ ಮಿಶ್ರಾ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿದರು.

ನ್ಯಾಯಾಲಯದಲ್ಲಿ ಚಾಲಕನ ವ್ಯತಿರಿಕ್ತಿ ಹೇಳಿಕೆ

ಫೆಬ್ರವರಿ 11 ರಂದು, ಮಿಶ್ರಾ ಕುಟುಂಬದ ಚಾಲಕ ಎಂದು ಪರಿಚಯಿಸಲಾದ ಮೋಹನ್, ತನ್ನ ವಕೀಲ ನರೇಂದ್ರ ಕುಮಾರ್ ಯಾದವ್ ಅವರೊಂದಿಗೆ ಕಾನ್ಪುರ ನ್ಯಾಯಾಲಯದ ಮುಂದೆ ಶರಣಾದಾಗ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು.
ಅಪಘಾತದ ಸಮಯದಲ್ಲಿ ತಾನು ಕಾರನ್ನು ಚಲಾಯಿಸುತ್ತಿದ್ದೆ ಎಂದು ಮೋಹನ್ ಹೇಳಿಕೆ ನೀಡಿದರು. ನಾನು ಕಾರನ್ನು ಚಲಾಯಿಸುತ್ತಿದ್ದಾಗ ಶಿವಂ ಅಸ್ವಸ್ತರಾದರು ನಾನು ಗಾಬರಿಗೊಂಡು ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅಘಫಾತ ಸಂಭವಿಸಿತು ಎಂಬ ಚಾಲಕ ಮೋಹನ್​ ನ್ಯಾಯಲಯಕ್ಕೆ ತಿಳಿಸಿದರು. ಅಘಫಾತದ ನಂತರ, ಬೌನ್ಸರ್‌ಗಳು ಕಾರಿನ ಬಾಗಿಲನ್ನು ಮುರಿದು ಶಿವಂನನ್ನು ವಾಹನದಿಂದ ಹೊರತೆಗೆದು ಮತ್ತೊಂದು ಕಾರಿಗೆ ಸ್ಥಳಾಂತರಿಸಿದರು ಎಂದು ಅವರು ಹೇಳಿದರು.
ಆದರೆ, ನ್ಯಾಯಾಲಯವು ಮೋಹನ್ ಅವರ ಶರಣಾಗತಿ ಅರ್ಜಿಯನ್ನು ತಿರಸ್ಕರಿಸಿತು. ಪೊಲೀಸ್ ವರದಿಯಲ್ಲಿ ಶಿವಂನನ್ನು ಆರೋಪಿ ಎಂದು ಸ್ಪಷ್ಟವಾಗಿ ಹೆಸರಿಸಲಾಗಿದೆ ಮತ್ತು ಮೋಹನ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯ ಹೇಳಿತು.

ಪೊಲೀಸರು ಉಲ್ಲೇಖಿಸಿದ ಸಾಕ್ಷ್ಯಗಳು

ಚಾಲಕನ ಹೇಳಿಕೆಯನ್ನು ವಿರೋಧಿಸಲು ಮತ್ತು ಶಿವಂನನ್ನು ಆರೋಪಿ ಎಂದು ಸ್ಥಾಪಿಸಲು ಪೊಲೀಸರು ಹಲವಾರು ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಅಪಘಾತದ ವೀಡಿಯೊ

ಅಪಘಾತದ ನಂತರ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ ಲಂಬೋರ್ಘಿನಿ ಕಾರಿನ ಹಿಂದೆ ವಾಹನದಿಂದ ಬೌನ್ಸರ್‌ಗಳು ಹೊರಬರುವುದನ್ನು ತೋರಿಸಲಾಗಿದೆ. ಅವರು ಇಟ್ಟಿಗೆಯಿಂದ ವಿಂಡ್‌ಶೀಲ್ಡ್​ನ್ನು ಓಡೆದು, ಬಾಗಿಲು ತೆರೆದು, ಶಿವಂನನ್ನು ಚಾಲಕನ ಸೀಟಿನಿಂದ ಹೊರಗೆಳೆದು ಮತ್ತೊಂದು ವಾಹನದಲ್ಲಿ ಕರೆದೊಯ್ಯುವುದನ್ನು ಕಾಣಬಹುದು. ಈ ದೃಶ್ಯಗಳಲ್ಲಿ ಚಾಲಕನ ಬದಿಯಿಂದ ಯಾವುದೇ ಎರಡನೇ ವ್ಯಕ್ತಿ ಹೊರಬರುವುದನ್ನು ತೋರಿಸಲಾಗಿಲ್ಲ.

ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು

10 ಕ್ಕೂ ಹೆಚ್ಚು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ತನಿಖಾಧಿಕಾರಿ ದಿನೇಶ್ ಸಿಂಗ್ ದಾಖಲಿಸಿದ್ದಾರೆ. ಎಲ್ಲರೂ ಶಿವಂ ಕಾರನ್ನು ಚಾಲನೆ ಮಾಡುತ್ತಿದ್ದನು ಮತ್ತು ವಾಹನದೊಳಗೆ ಬೇರೆ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ. ಅಪಘಾತದ ನಂತರ ಬೌನ್ಸರ್‌ಗಳು ಅವನನ್ನು ಚಾಲಕನ ಸೀಟಿನಿಂದ ಹೊರತೆಗೆದರು ಎಂದು ಅವರು ದೃಢಪಡಿಸಿದರು.

ಮೊಬೈಲ್ ಡೇಟಾ ಮತ್ತು ಸಿಸಿಟಿವಿ ದೃಶ್ಯಗಳು

ಅಪಘಾತದ ಸಮಯದಲ್ಲಿ ಶಿವಂನ ಮೊಬೈಲ್ ಫೋನ್ ವಿಐಪಿ ರಸ್ತೆಯ ಅಪಘಾತ ನಡೆದ ಸ್ಥಳದಲ್ಲಿ ಇತ್ತು ಎಂದು ತೋರಿಸಿದೆ. ನಗರಸಭೆಯಿಂದ ಪಡೆದ ಸಿಸಿಟಿವಿ ಕ್ಯಾಮರಾ ಅಫಘಾತದ ದೃಶ್ಯಗಳನ್ನು ಸೆರೆಹಿಡಿದಿದೆ. ಪೊಲೀಸರ ಪ್ರಕಾರ, ವಾಹನದೊಳಗೆ ಒಬ್ಬ ವ್ಯಕ್ತಿ ಮಾತ್ರ ಇದ್ದಾನೆ ಎಂದು ದೃಶ್ಯಾವಳಿಗಳು ಸೂಚಿಸಿವೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net