ಬಕೆಟ್ ನೀರಿಗೆ ಬರಿ ಅರ್ಧ ಲೀಟರ್ ಹಾಲು! ಸರ್ಕಾರಿ ಶಾಲೆಯ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟ; ವಿಡಿಯೋ ವೈರಲ್​ | Milk

ಬಕೆಟ್​ ನೀರಿನಲ್ಲಿ ಹಾಲನ್ನು ಬರೆಸುತ್ತಿರುವ ಮಹಿಳೆ
ಬಕೆಟ್​ ನೀರಿನಲ್ಲಿ ಹಾಲನ್ನು ಬರೆಸುತ್ತಿರುವ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ಹಾಲಿಗೆ ಕಲಿಯುಗದ ಅಮೃತದ ಸ್ಥಾನವನ್ನು ನೀಡಲಾಗಿದೆ
  • ಮಕ್ಕಳ ಪೌಷ್ಠಕಾಂಶವನ್ನು ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟದ ಜತೆಗೆ ಹಾಲನ್ನು ನೀಡುತ್ತಿರುವ ಸರ್ಕಾರ
  • ಮಕ್ಕಳಿಗೆ ನೀಡಬೇಕಾದ ಹಾಲಿನಲ್ಲಿ ನೀರನ್ನು ಬೆರೆಸುತ್ತಿರುವ ಶಾಲಾ ಸಿಬ್ಬಂದಿ
  • ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ
ಉತ್ತರ ಪ್ರದೇಶ: ಹಾಲ(Milk) ನ್ನು ಕಲಿಯುಗದ ಅಮೃತ ಎಂದು ಕರೆಯಲಾಗುತ್ತದೆ. ಮಾನವರು ಹುಟ್ಟಿದ ಕೇವಲ ಎರಡು ವರ್ಷ ಮಾತ್ರ ತಾಯಿಯ ಎದೆಹಾಲನನ್ನು ಕುಡಿದರೆ, ನಂತರ ಬದುಕಿರುವ ತನಕ ಹಸು, ಎಮ್ಮೆ ಅಥವಾ ಮೇಕೆ ಹಾಲನ್ನು ಕುಡಿಯುತ್ತಾನೆ.
ಅದರಂತೆಯೇ ದೇಶದಲ್ಲಿರುವ ಶಾಲೆಯ ಮಕ್ಕಳ ಅದರಲ್ಲಿಯೂ ಸರ್ಕಾರಿ ಶಾಲೆ ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆಯಾಗಲಿ ಎಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಹಾಲನ್ನು ನೀಡುವ ಯೋಜನೆಯನ್ನು ರೂಪಿಸಲಾಗಿದೆ.
ಆದರೆ ಇತ್ತೀಚೆಗೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಹಾಲಿನಲ್ಲಿ ನೀರನ್ನು ಬೆರೆಸುತ್ತಿರುವ ವಿಡಿಯೋ ಎಲ್ಲಡೆ ವೈರಲ್​ ಆಗುತ್ತಿದ್ದು, ಸರ್ಕಾರದ ಯೋಜನೆ ಎಷ್ಟರ ಮಟ್ಟಿಗೆ ಜನರನ್ನು ತಲುಪುತ್ತಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಧಿಕ್ವಾಹ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ನಿಯಮಗಳ ಪ್ರಕಾರ, ಶಾಲೆಯಲ್ಲಿರುವ ಸುಮಾರು 50 ವಿದ್ಯಾರ್ಥಿಗಳಿಗೆ, ಪ್ರತಿ ವಿದ್ಯಾರ್ಥಿಗೆ ಹೊಸದಾಗಿ ಬೇಯಿಸಿದ ಆಹಾರದ ಜತೆಗೆ 200 ಮಿ.ಲೀ ಶುದ್ಧ ಹಾಲನ್ನು ನೀಡಬೇಕೆಂದು ಹೇಳಲಾಗಿದೆ. ಆದರೆ ಈ ಶಾಲೆ ಸರ್ಕಾರದ ಯೋಜನೆಯ ನಿಯಮವನ್ನು ಗಾಳಿಗೆ ತೂರಿದೆ.

ಹಾಲಿನಲ್ಲಿ ನೀರೋ? ನೀರಿನಲ್ಲಿ ಹಾಲೋ?

ಈದೀಗ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಮಹಿಳೆಯೊಬ್ಬಳು ಒಂದು ಬಕೆಟ್​ನಲ್ಲಿರುವ ಕೊಳಕಾದ ನೀರಿಗೆ, ಅರ್ಧ ಲೀಟರ್​ ಅಮುಲ್​ ಹಾಲನ್ನು ಬರೆಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಇದೇ ವಿಡಿಯೋನಲ್ಲಿ ಶಿಕ್ಷಕರು, ಮಕ್ಕಳಿಗೆ ಹಾಲು ಕುಡಿಯಲು ಬರಲು ಕರೆಯುತ್ತಿರುವುದನ್ನು ಸಹ ಕೇಳಬಹುದಾಗಿದೆ.

ಈ ಶಾಲೆಗೆ ವಿವಾದ ಹೊಸತೇನಲ್ಲ

ಕೆಲ ತಿಂಗಳುಗಳ ಹಿಂದೆ ಇದೇ ಶಾಲೆಯ ಪ್ರಾಂಶುಪಾಲರು ಪಾಠ ಮಾಡುವ ವೇಳೆಯಲ್ಲಿ ಮಲಗಿರುವ ವಿಡಿಯೋ ವೈರಲ್​ ಆಗಿದನ್ನು ನಾವು ನೆನೆಪಸಿಕೊಳ್ಳಬಹುದು. ಆ ವಿಡಿಯೋ ವೈರಲ್​ ಆದ ನಂತರ ಪ್ರಾಂಶುಪಾಲರ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ಈಗ ಈ ಕಳಪೆ ಗುಣಮಟ್ಟದ ಹಾಲನ್ನು ನೀಡಿದ್ದ ಆರೋಪದ ಹಿನ್ನಲೆ, ಮಹೋಬಾ ಜಿಲ್ಲಾ ಶಿಕ್ಷಣಾಧಿಕಾರಿ ರಾಹುಲ್ ಮಿಶ್ರಾ, ಉಸ್ತುವಾರಿ ಶಿಕ್ಷಕಿ ಮೋನಿಕಾ ಸೋನಿ ಅವರನ್ನು ಅಮಾನತ್ತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರವು ಪ್ರತಿ ಮಗುವಿಗೆ ಸ್ಥಳೀಯವಾಗಿ ಲಭ್ಯವಿರುವ 200 ಮಿಲಿ ಶುದ್ಧ ಅಥವಾ ಪ್ಯಾಕ್ ಮಾಡಿದ ಹಾಲನ್ನು ನೀಡಬೇಕೆಂದು ನಿರ್ದೇಶಿಸಲಾಗಿದೆ. ಆದರೆ ಈ ಶಾಲೆಯು ನಿಗದಿತ ಮಾನದಂಡದ ಪ್ರಕಾರ ಹಾಲು ನೀಡುತ್ತಿಲ್ಲ ಎಂದು ತಿಳಿದು ಬಂದಿದೆ ಎಂದು ಮೂಲ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಹಂಚಿಕೊಂಡಿದ್ದಾರೆ. ಈ ಘಟನೆಯು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಸರ್ಕಾರಿ ಸಂಪನ್ಮೂಲಗಳ ದುರುಪಯೋಗವನ್ನು ತೋರಿಸುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೆಟ್ಟಿಗರಿಂದ ತೀವ್ರ ತರಾಟೆ

ಈ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿದಾಡಿದ ಪರಿಣಾಮ, ಅನೇಕ ಬಳಕೆದಾರರು ಪೌಷ್ಟಿಕಾಂಶ ಯೋಜನೆಗಳ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರತಿ ಮಗುವಿಗೆ 200 ಮಿ.ಲೀ ಹಾಲನ್ನು ಕೊಡಿ ಎಂದು ಸರ್ಕಾರ ಹೇಳಿದರೆ ಇಲ್ಲಿ, 500 ಮಿ.ಲೀ ಹಾಲನ್ನು ಬಕೆಟ್​ ನೀರಿನೊಂದಿಗೆ ಬೆರಸಲಾಗುತ್ತಿದೆ ಎಂದು ಒಬ್ಬ ಬಳಕೆದಾರ ಹೇಳಿದರೆ, ಈ ಹಾಲನ್ನು ಕುಡಿದ ಮಕ್ಕಳಲ್ಲಿ ಇರುವ ಪೌಷ್ಠಕಾಂಶವು ಕರಗಿ ಹೋದರು ಆಶ್ಚರ್ಯವಿಲ್ಲ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net