ಇಸ್ರೋ ಖಾಸಗೀಕರಣ ಖಚಿತ? ಒಂದೇ ಒಂದು ವಾಕ್ಯದಲ್ಲಿ ನೌಕರರ ಗೊಂದಲಕ್ಕೆ ಫುಲ್​ಸ್ಟಾಪ್​ ಹಾಕಿದ ನಾರಾಯಣನ್ | ISRO Privatisation

ಇಸ್ರೋ ಖಾಸಗೀಕರಣ ವಿವಾದ
ಇಸ್ರೋ ಖಾಸಗೀಕರಣ ವಿವಾದ
Published on: 

ಪ್ರಮುಖ ಮುಖ್ಯಾಂಶಗಳು

  • ಭಾರತದ ಹೆಮ್ಮೆ ಇಸ್ರೋ ಶೀಘ್ರವೇ ಖಾಸಗೀಕರಣಕ್ಕೆ ವದಂತಿ
  • ಈ ಕುರಿತಂತೆ ಸ್ವತಃ ಇಸ್ರೋ ಮುಖ್ಯಸ್ಥ ನಾರಾಯಣನ್ ಸ್ಪಷ್ಟನೆ
  • ನೌಕರರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ನಾರಾಯಣನ್​
ISRO Privatisation: ಇಸ್ರೋ ಖಾಸಗೀಕರಣ ಶೀಘ್ರವೇ ಬಹುತೇಕ ಖಚಿತ ಎಂಬ ಸುದ್ದಿಗಳು ಕೆಲ ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಂತೆ ಭಾರತೀಯರು ಸಹ ತೀರ ಕಳವಳ ವ್ಯಕ್ತಪಡಿಸಿದ್ದರು. ಉದ್ಯೋಗಿಗಳು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಇದೀಗ ಸ್ವತಃ ಇಸ್ರೋ ಮುಖ್ಯಸ್ಥರಾದ ಡಾ.ವಿ. ನಾರಾಯಣನ್​ ಸ್ಪಷ್ಟ ಹಾಗೂ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.
ಸದ್ಯದ ಬೆಳವಣಿಗೆಗಳಿಂದ ಇಸ್ರೋ ಖಾಸಗೀಕರಣಗೊಳ್ಳಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದ ಮುಖ್ಯಸ್ಥರು, ಇಸ್ರೋವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪವೂ ಸದ್ಯಕ್ಕೆ ನಡೆದಿಲ್ಲ. ಇದು ಸರ್ಕಾರಿ ಸಂಸ್ಥೆಯಾಗಿಯೇ ಮುಂದುವರಿಯಲಿದೆ ಎಂದು ನೌಕರರಿಗೆ ಭರವಸೆ ನೀಡಿದರು. ದೇಶದ ಬಾಹ್ಯಾಕಾಶ ಪರಿಶೋಧನೆ, ಸುಧಾರಿತ ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಕಾರ್ಯಾಚರಣೆಗಳಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂದು ಒತ್ತಿ ಹೇಳಿದರು.

ನೌಕರರ ಆತಂಕಕ್ಕೆ ಕಾರಣವೇನು?

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಭವಿಷ್ಯದ ಪಾತ್ರದ ಬಗ್ಗೆ ನೌಕರರ ಸಂಘಗಳಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಯಿತು. ಪ್ರಸ್ತುತ, ಇಸ್ರೋ ಅಧೀನದಲ್ಲಿರುವ ರಾಕೆಟ್‌ಗಳು, ಉಪಗ್ರಹಗಳು ಮತ್ತು ಇತರ ಬಾಹ್ಯಾಕಾಶ ವ್ಯವಸ್ಥೆಗಳ ತಯಾರಿಕೆಯನ್ನು ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಹಸ್ತಾಂತರಿಸಬಹುದು ಎಂಬ ಊಹಾಪೋಹಗಳು ಹರಿದಾಡಿತ್ತು. ಇದರೊಂದಿಗೆ ಇಸ್ರೋ ನೌಕರರ ಸಂಘಗಳು ಇದು ಖಂಡಿತ ಖಾಸಗೀಕರಣಕ್ಕೆ ಒಳಪಡಲಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿತ್ತು. ಕಡೆಗೂ ಇದೆಲ್ಲದಕ್ಕೂ ಈಗ ಸ್ಪಷ್ಟ ಚಿತ್ರಣ ಸಿಕ್ಕಂತಾಗಿದೆ. 

ಖಾಸಗಿ ವಲಯದ ಅವಕಾಶಗಳು ನಿಜ

ಈ ಹಿನ್ನೆಲೆಯಲ್ಲಿ ಮಾತನಾಡಿದ ನಾರಾಯಣನ್, ಇಸ್ರೋದಲ್ಲಿ ಸುಮಾರು 20,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಅವರಿಗೆ ಯಾವುದೇ ಕಳವಳಗಳಿದ್ದರೆ ಅದನ್ನು ಪರಿಹರಿಸಲು ಸಂಸ್ಥೆಯು ಖಂಡಿತವಾಗಿಯೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ಸಮಸ್ಯೆಗೆ ಪ್ರತ್ಯೇಕವಾಗಿ ಲಿಖಿತ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದ ಅವರು, ನೌಕರರ ಸಮಸ್ಯೆಗಳನ್ನು ಖಂಡಿತಾ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಖಾಸಗಿ ವಲಯಕ್ಕೆ ಅವಕಾಶಗಳು ಹೆಚ್ಚುತ್ತಿವೆ. ಭವಿಷ್ಯದಲ್ಲಿ, ಕೈಗಾರಿಕೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಈಗಾಗಲೇ ತಾಂತ್ರಿಕವಾಗಿ ಅಭಿವೃದ್ಧಿಪಡಿಸಲಾದ ರಾಕೆಟ್‌ಗಳು, ಸರಳ ಉಪಗ್ರಹಗಳು ಮತ್ತು ಇತರ ವ್ಯವಸ್ಥೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ, ಇದನ್ನು ಇಸ್ರೋ ಖಾಸಗೀಕರಣ ಎಂದು ಪರಿಗಣಿಸಬಾರದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ವರ್ಷಕ್ಕೆ 50 ಅಂತಾರಾಷ್ಟ್ರೀಯ ಉಡಾವಣೆಗಳು

ದೇಶದಲ್ಲಿ ವರ್ಷಕ್ಕೆ 50 ಬಾಹ್ಯಾಕಾಶ ಉಡಾವಣೆಗಳನ್ನು ನಡೆಸುವ ಮಟ್ಟವನ್ನು ತಲುಪಲು ಒಂದೇ ಸಂಸ್ಥೆಯನ್ನು ಅವಲಂಬಿಸುವುದು ಸಾಧ್ಯವಿಲ್ಲ ಎಂದು ಇಸ್ರೋ ವಾದಿಸಿದೆ. ಅದಕ್ಕಾಗಿಯೇ, ಇದು ಖಾಸಗಿ ಕಂಪನಿಗಳು, ಸ್ಟಾರ್ಟಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಯೋಜಿಸಿದೆ.
ಪ್ರಸ್ತುತ ಬದಲಾವಣೆಗಳನ್ನು ಇಸ್ರೋದ ಖಾಸಗೀಕರಣ ಎಂದು ನೋಡಬಾರದು, ಬದಲಿಗೆ ಭಾರತದ ಬಾಹ್ಯಾಕಾಶ ಕ್ಷೇತ್ರದ ವಿಸ್ತರಣೆ ಎಂದು ಸಂಸ್ಥೆ ಹೇಳಿದೆ. ಭವಿಷ್ಯದಲ್ಲಿ ಇಸ್ರೋ ಸರ್ಕಾರಿ ಸಂಸ್ಥೆಯಾಗಿಯೇ ಮುಂದುವರಿಯಲಿದೆ ಎಂದು ನಾರಾಯಣನ್ ಸ್ಪಷ್ಟಪಡಿಸಿರುವುದು ಉದ್ಯೋಗಿಗಳಲ್ಲಿ ಮೂಡಿದ್ದ ಅನುಮಾನ, ಗೊಂದಲಗಳಿಗೆ ಸಂಪೂರ್ಣವಾಗಿ ತೆರೆ ಎಳೆದಿದೆ,(ಏಜೆನ್ಸೀಸ್).