ಇರಾನ್​-ಅಮೆರಿಕ ನಡುವೆ ಕದನ ವಿರಾಮ; ಶಾಂತಿ ಮಾತುಕತೆಗೆ ಇಸ್ಲಾಮಾಬಾದ್​ಗೆ ಆಗಮಿಸಿದ ಜೆ.ಡಿ.ವ್ಯಾನ್ಸ್​ ನೇತೃತ್ವದ ಅಮೆರಿಕ ನಿಯೋಗ | US delegation

ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​
ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​
Published on
ಇಸ್ಲಾಮಾಬಾದ್​: ಇರಾನ್​ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಕದನ ವಿರಾಮದ ಬಳಿಕ ಶಾಂತಿ ಮಾತುಕತೆಗಾಗಿ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​ ನೇತೃತ್ವದ ಅಮೆರಿಕ ನಿಯೋಗ(US delegation) ಇಂದು(ಏ. 11) ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಆಗಮಿಸಿದ್ದು, ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಸೇರಿ ಪಾಕ್ ಅಧಿಕಾರಿಗಳು ಸ್ವಾಗತಿಸಿದ್ದಾರೆ.
ಶನಿವಾರ ಮುಂಜಾನೆ ಇರಾನಿನ ನಿಯೋಗ ಇಸ್ಲಾಮಾಬಾದ್ ತಲುಪಿದ ಕೆಲವೇ ಗಂಟೆಗಳ ನಂತರ ಅಮೆರಿಕ ನಿಯೋಗ ಆಗಮಿಸಿದ್ದು, ನಿಯೋಗದಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಸಲಹೆಗಾರ ಜೇರೆಡ್ ಕುಶ್ನರ್ ಇದ್ದು, ಮಾತುಕತೆಗಳಲ್ಲಿ ವಾಷಿಂಗ್ಟನ್‌ನ ನಿಲುವುಗಳನ್ನು ವಿವರಿಸಲಿದ್ದಾರೆ ಎನ್ನಲಾಗಿದೆ.
ಇರಾನ್ ಮತ್ತು ಅಮೆರಿಕದ ನಿಯೋಗಗಳು ಮೊದಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸುವ ನಿರೀಕ್ಷೆಯಿದ್ದು, ಬಳಿಕ ರಾಜತಾಂತ್ರಿಕ ಮಾತುಕತೆಗಳ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇರಾನ್​ಗೆ ಎಚ್ಚರಿಕೆ ನೀಡಿದ್ದ ವ್ಯಾನ್ಸ್

ಇಸ್ಲಾಮಾಬಾದ್​ಗೆ ತೆರಳು ಮುನ್ನ ಮಾತನಾಡಿದ್ದ ಜೆ.ಡಿ.ವ್ಯಾನ್ಸ್​, ಶಾಂತಿ ಮಾತುಕತೆ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದು, ನಾವು ಮಾತುಕತೆಗಾಗಿ ಎದುರು ನೋಡುತ್ತಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ಭಾವಿಸುತ್ತೇನೆ. ಇದೇ ವೇಳೆ ಶಾಂತಿ ಮಾತುಕತೆಗೆ ಬರದೇ ಅಮೆರಿಕ ಜೊತೆ ಆಟವಾಡಬಾರದು ಎಂದು ಇರಾನ್​ಗೆ ಎಚ್ಚರಿಕೆ ನೀಡಿದ್ದರು.

ಎರಡು ಪ್ರಮುಖ ಷರತ್ತು ಒಪ್ಪಿಗೆಗೆ ಇರಾನ್ ಒತ್ತಾಯ

ಇನ್ನೂ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರ ನೇತೃತ್ವದ ಇರಾನ್ ನಿಯೋಗವು, ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷವನ್ನು ಪರಿಹರಿಸಲು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಆಗಮಿಸಿದೆ. ಮತ್ತು ಅಮೆರಿಕ ಇರಾನ್​ನ ಪೂರ್ವಭಾವಿ ಷರತ್ತುಗಳನ್ನು ಒಪ್ಪಿಕೊಂಡರೇ ಮಾತ್ರ ಮಾತುಕತೆ ಮುಂದುವರೆಯುತ್ತದೆ ಎಂದು ಹೇಳಿದೆ.
ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಅವರು, ಕದನ ವಿರಾಮ ಮತ್ತು ನಿರ್ಬಂಧಿತ ಇರಾನಿನ ಸ್ವತ್ತುಗಳ ಬಿಡುಗಡೆ ಈ ಎರಡು ಅಂಶಗಳನ್ನು ಪರಸ್ಪರ ಒಪ್ಪಿಕೊಂಡಿದ್ದು, ಇನ್ನೂ ಜಾರಿಗೆ ತಂದಿಲ್ಲ. ಮಾತುಕತೆಗಳು ಪ್ರಾರಂಭವಾಗುವ ಮೊದಲು ಈ ಎರಡು ವಿಷಯಗಳನ್ನು ಪೂರೈಸಬೇಕು ಎಂದು ಹೇಳಿದ್ದಾರೆ.

ಶಾಂತಿ ಒಪ್ಪಂದಕ್ಕೆ 15 ಅಂಶ ಸಿದ್ದಪಡಿಸಿರುವ ಅಮೆರಿಕ

ಇನ್ನೂ ಶಾಂತಿ ಮಾತುಕತೆಗೆ ಸಂಬಂಧಪಟ್ಟಂತೆ ಟ್ರಂಪ್ ಆಡಳಿತವು ತನ್ನದೇ ಆದ 15 ಅಂಶಗಳನ್ನು ಸಿದ್ದಪಡಿಸಿದ್ದು, ವಿವರಗಳನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು, ಹೆಚ್ಚು ಸಮೃದ್ಧವಾಗಿರುವ ಯುರೇನಿಯಂನ ದಾಸ್ತಾನುಗಳನ್ನು ಒಪ್ಪಿಸಬೇಕು, ತನ್ನ ಮಿಲಿಟರಿ ಸಾಮರ್ಥ್ಯಗಳ ಮೇಲಿನ ಮಿತಿಗಳನ್ನು ಒಪ್ಪಿಕೊಳ್ಳಬೇಕು ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಬೇಕು ಎಂಬ ಅಂಶಗಳನ್ನು ಒಳಗೊಂಡಿದೆ.
ಇರಾನ್ ಸಹ ತನ್ನದೇ ಆದ 10 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಪ್ರಮುಖವಾಗಿ ಲೆಬನಾನ್ ಮೂಲದ ಮಿತ್ರ ರಾಷ್ಟ್ರವಾದ ಹೆಜ್ಬೊಲ್ಲಾ ಮೇಲಿನ ಯಾವುದೇ ದಾಳಿಯನ್ನು ಕದನ ವಿರಾಮ ಒಳಗೊಳ್ಳುತ್ತದೆ ಎಂದು ಹೇಳಿದೆ. ಆದರೆ ಇಸ್ರೇಲ್ ಲೆಬನಾನ್ ಮೇಲೆ ನಿಲ್ಲಿಸಲ್ಲ ಎಂದು ದೃಢವಾಗಿ ತಿಳಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net