ಬುಡಕಟ್ಟು ಮಹಿಳೆಯನ್ನು ಅವಮಾನಿಸಿದ ಪಕ್ಷ ಛಿದ್ರವಾಗುವುದು ಖಚಿತ..ಟಿಎಂಸಿ ಸರ್ಕಾರದ ವಿರುದ್ಧ ಗುಡುಗಿದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಕೋಲ್ಕತ್ತಾ: ದೇಶಾದ್ಯಂತ ಅದ್ದೂರಿಯಾಗಿ ಮಹಿಳಾ ದಿನಾಚರಣೆ ನಡೆಯುತ್ತಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ರಾಷ್ಟ್ರಪತಿ ಗೌರವದ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಭಾರಿ ಸಂಘರ್ಷ ಶುರುವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಶ್ಚಿಮ ಬಂಗಾಳ ಭೇಟಿಯ ವೇಳೆ ಉಂಟಾದ ಶಿಷ್ಟಾಚಾರದ ಲೋಪ ಮತ್ತು ಅಸಮಾಧಾನವನ್ನು ಅಸ್ತ್ರವಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಬುರಾರಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಸರ್ಕಾರದ ನಡವಳಿಕೆಯನ್ನು ಕಟುವಾಗಿ ಟೀಕಿಸಿದರು. ಇಂದು ಇಡೀ ದೇಶ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಆದರೆ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ದೇಶದ ಮಹಿಳಾ ರಾಷ್ಟ್ರಪತಿಯನ್ನು ಅವಮಾನಿಸಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ಬದಲಿಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಉನ್ನತ ಸಂಪ್ರದಾಯಗಳಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಗುಡುಗಿದರು.
ಬುಡಕಟ್ಟು ಸಮುದಾಯದ ಕಾರ್ಯಕ್ರಮವೊಂದನ್ನು ಹಾಳುಮಾಡಲು ಟಿಎಂಸಿ ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಆರೋಪಿಸಿದ ಪ್ರಧಾನಿ, ಬುಡಕಟ್ಟು ಸಮುದಾಯದ ಮಹಿಳೆಯಾಗಿರುವ ರಾಷ್ಟ್ರಪತಿಯವರನ್ನು ಅವಮಾನಿಸಿದ ಪಕ್ಷವು ಛಿದ್ರವಾಗಿ ಹೋಗುತ್ತದೆ, ಅಹಂಕಾರ ಎಷ್ಟೇ ದೊಡ್ಡದಿದ್ದರೂ ಅದು ನಾಶವಾಗುವುದು ಖಚಿತ. ಪಶ್ಚಿಮ ಬಂಗಾಳದ ಜನರು ಈ ಘಟನೆಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಬಿರುಗಾಳಿ ಎಬ್ಬಿಸಿದ ರಾಷ್ಟ್ರಪತಿಗಳ ಬಂಗಾಳ ಪ್ರವಾಸ

ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉತ್ತರ ಬಂಗಾಳಕ್ಕೆ ನೀಡಿದ ಭೇಟಿಯ ಸಂದರ್ಭದಲ್ಲಿ. ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆದರೆ, ಈ ವೇಳೆ ರಾಜ್ಯ ಸರ್ಕಾರದ ಪದಾಧಿಕಾರಿಗಳ ಅನುಪಸ್ಥಿತಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ರಾಷ್ಟ್ರಪತಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಷ್ಟ್ರಪತಿಗಳು ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಮಾತನಾಡಿದ್ದ ದ್ರೌಪದಿ ಮುರ್ಮು ಅವರು ನೇರವಾಗಿಯೇ ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ರಾಷ್ಟ್ರಪತಿಗಳು ರಾಜ್ಯಕ್ಕೆ ಬಂದಾಗ ಮುಖ್ಯಮಂತ್ರಿಗಳು ಮತ್ತು ಸಚಿವರು ಸ್ವಾಗತಿಸಬೇಕು. ಆದರೆ ಇಲ್ಲಿ ಯಾರೂ ಬರಲಿಲ್ಲ. ಶೌಚಾಲಯಗಳಲ್ಲಿ ನೀರಿಲ್ಲ, ರಸ್ತೆಯಲ್ಲಿ ಕಸ ತುಂಬಿದೆ. ಬಹುಶಃ ಬಂಗಾಳ ಸರ್ಕಾರಕ್ಕೆ ಬುಡಕಟ್ಟು ಜನರ ಅಭಿವೃದ್ಧಿ ಬೇಕಿಲ್ಲ ಅನಿಸುತ್ತಿದೆ, ಅದಕ್ಕಾಗಿಯೇ ಜನರನ್ನು ಈ ಕಾರ್ಯಕ್ರಮಕ್ಕೆ ಬರದಂತೆ ತಡೆಯಲಾಗಿದೆ ಎಂದು ಹೇಳಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net