ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹೋಗಲ್ಲ: ಈ ಆದೇಶವನ್ನು ನಾವು ಒಪ್ಪುವುದಿಲ್ಲ; ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದ ಭಾರತ! Indus Waters Treaty

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಪಾಕಿಸ್ತಾನದೊಂದಿಗೆ ದಶಕಗಳಿಂದ ನಡೆದುಕೊಂಡು ಬಂದಿರುವ ಸಿಂಧೂ ಜಲ ಒಪ್ಪಂದದ (Indus Waters Treaty) ವಿಚಾರದಲ್ಲಿ ಭಾರತ ಮತ್ತೊಮ್ಮೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 

ಸಿಂಧೂ ಜಲ ಒಪ್ಪಂದದ ಕುರಿತು ಮಧ್ಯಸ್ಥಿಕೆ ನ್ಯಾಯಾಲಯ  ನೀಡಿದ ತೀರ್ಪನ್ನು ಭಾರತ ಸರ್ಕಾರ ಸೋಮವಾರ (ಆ.31)  ತಿರಸ್ಕರಿಸಿದ್ದು, ಈ ಮಧ್ಯಸ್ಥಿಕೆ ಸಂಸ್ಥೆಯನ್ನು ಕಾನೂನುಬಾಹಿರವಾಗಿ ರಚಿಸಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ತೀರ್ಪು ನೀಡಲು ಈ ಸಂಸ್ಥೆಗೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ. 

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದ ಹಿನ್ನಲೆ ಭಾರತ, 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿ ಐತಿಹಾಸಿಕ ಮತ್ತು ದಂಡನಾತ್ಮಕ ಕ್ರಮಗಳನ್ನು ಘೋಷಿಸಿತ್ತು.

ನಮ್ಮ ನಿರ್ಧಾರ ಬದಲಾಗಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನ್ಯಾಯಾಲಯ ಹೊರಡಿಸಿರುವ ಆದೇಶಗಳು ಭಾರತದ ಸಾರ್ವಭೌಮ ಕ್ರಮಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವು ಎಂದಿನಂತೆ ಜಾರಿಯಲ್ಲಿದೆ ಎಂದು ಪುನರುಚ್ಚರಿಸಿದೆ.

ವಿಶ್ವಬ್ಯಾಂಕ್ ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಮಧ್ಯಸ್ಥಿಕೆ ನ್ಯಾಯಾಲಯವನ್ನು ರಚಿಸಲಾಗಿದೆ. ಇದು ಸಂಪೂರ್ಣವಾಗಿ ಕಾನೂನುಬಹಿರ. ಈ ಕಾರಣಕ್ಕೇ ಭಾರತವು ಈ ನ್ಯಾಯಾಲಯದ ತೀರ್ಪನ್ನು ಹಾಗೂ ಇದರ ಹಿಂದಿನ ಎಲ್ಲಾ ಘೋಷಣೆಗಳನ್ನು ಆರಂಭದಿಂದಲೂ ತಿರಸ್ಕರಿಸುತ್ತಾ ಬಂದಿದೆ ಎಂದು ವಿದೇಶಾಂಗ ಇಲಾಖೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.


ಕಾನೂನಿನ ಅಡಿಯಲ್ಲಿ ಈ ಮಧ್ಯಸ್ಥಿಕೆ ಸಂಸ್ಥೆಯ ಅಸ್ತಿತ್ವವನ್ನೇ ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಈ ಸಂಸ್ಥೆಯ ಸ್ಥಾಪನೆಯೇ ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯಾಗಿದೆ. ಹೀಗಾಗಿ ಭಾರತವು ಈವರೆಗೆ ಒಮ್ಮೆಯೂ ಈ ಸಂಸ್ಥೆಯ ವಿಚಾರಣೆಗಳ ಮುಂದೆ ಹಾಜರಾಗಿಲ್ಲ ಮತ್ತು ಇವರ ಯಾವುದೇ ಆದೇಶಗಳನ್ನು ಪರಿಗಣಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವಾಲಯ ಪುನರುಚ್ಚರಿಸಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net