ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರಿಂದ ದಾಳಿ ಆರೋಪ; ಸಮುದ್ರದಲ್ಲಿ ಮುಳುಗಿದ ಭಾರತೀಯ ಹಡಗು: 13 ನಾವಿಕರ ರಕ್ಷಣೆ | Indian ship
ಸಾಂದರ್ಭಿಕ ಚಿತ್ರ
Published on:
Copied
Follow Us
Indian ship: ಯೆಮೆನ್‌ನ ಪಶ್ಚಿಮ ಕರಾವಳಿಯ ಕೆಂಪು ಸಮುದ್ರದಲ್ಲಿ ಮಂಗಳವಾರ(ಆ. 04) ಭಾರತದ ಧ್ವಜ ಹೊತ್ತ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಬಳಿಕ ಹಡಗು ಸಮುದ್ರದಲ್ಲಿ ಮುಳುಗಿದೆ. ಅದರಲ್ಲಿದ್ದ 13 ಭಾರತೀಯ ನಾವಿಕರು ಸೇರಿ 14 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಹೌತಿ ಬಂಡುಕೋರರ ಹಿಡಿತದಲ್ಲಿರುವ ಬಂದರು ನಗರ ಹೊಡೈದಾದಿಂದ ದಕ್ಷಿಣಕ್ಕೆ ಸುಮಾರು 13 ನಾಟಿಕಲ್ ಮೈಲು ದೂರದಲ್ಲಿ ಭಾರತದ ಎಂಎಸ್‌ವಿ ಫೈಜ್ ನೂರ್ ಒಲಿಯಾ ಎಂಬ ಹಡಗಿನ ಮೇಲೆ ದಾಳಿ ನಡೆದಿದೆ. ಎಲ್ಲಾ 14 ನಾವಿಕರನ್ನು ಯೆಮೆನ್ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದು, ಅವರಿಗೆ ವೈದ್ಯಕೀಯ ನೆರವು ನೀಡಿವೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್, ಭಾರತೀಯ ಧ್ವಜ ಹೊತ್ತ ವಾಣಿಜ್ಯ ಹಡಗು ಯೆಮೆನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಕ್ಷಿಪಣಿ ಡಿಕ್ಕಿ ಹೊಡೆದ ಬಳಿಕ ಭಾರತೀಯ ಹಡಗು ಮುಳುಗಿದೆ ಎಂದು ತಿಳಿಸಿದ್ದಾರೆ.
ಭಾರತದ ಎಂಎಸ್‌ವಿ ಫೈಜ್ ನೂರ್ ಒಲಿಯಾ ದಾಳಿ ಬಳಿಕ ಸ್ಪೋಟಗೊಂಡು ಸಮುದ್ರದಲ್ಲಿ ಮುಳುಗಿದೆ. ಹಡಗಿನಲ್ಲಿದ್ದ ಎಲ್ಲಾ 13 ಭಾರತೀಯ ಸಿಬ್ಬಂದಿ ಮತ್ತು ಒಬ್ಬ ವಿದೇಶಿ ಪ್ರಜೆಯನ್ನು ಯೆಮೆನ್ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿ ಮೋಖಾ ಬಂದರಿಗೆ ಕರೆದೊಯ್ದಿವೆ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.
ದಾಳಿ ಖಂಡಿಸಿದ ಭಾರತ
ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲಿನ ದಾಳಿಯನ್ನು ಖಂಡಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯ, ಮಂಗಳವಾರ ಸಂಜೆ ಯೆಮೆನ್ ಬಳಿಯ ಕೆಂಪು ಸಮುದ್ರದಲ್ಲಿ ಮುಳುಗಿದ ಭಾರತೀಯ ಧ್ವಜ ಹೊತ್ತ ವಾಣಿಜ್ಯ ಹಡಗಿನ ಮೇಲಿನ ದಾಳಿ ತೀವ್ರ ಕಳವಳಕಾರಿ ಎಂದು ಹೇಳಿದೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದು ಕೊನೆಗೊಳ್ಳಬೇಕು. ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಅಂತರರಾಷ್ಟ್ರೀಯ ಜಲಮಾರ್ಗಗಳ ಮೂಲಕ ಮುಕ್ತ ಮತ್ತು ಅಡೆತಡೆಯಿಲ್ಲದ ಸಂಚರಣೆ ಮತ್ತು ವಾಣಿಜ್ಯವನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಕರೆ ನೀಡಿದೆ (ಏಜೆನ್ಸೀಸ್).