ಆಪರೇಷನ್​ ಸಿಂಧೂರ್​ ಬಳಿಕ ಬ್ರಹ್ಮೋಸ್ ಕ್ಷಿಪಣಿಯ ಅಭಿವೃದ್ಧಿಗೆ ಮುಂದಾದ ಭಾರತ | Brahmos Missile

Brahmos Missile
Brahmos Missile
Published on

ಪ್ರಮುಖ ಮುಖ್ಯಾಂಶಗಳು

  • ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ವಾಯುನೆಲೆಗಳನ್ನು ನಾಶಪಡಿಸಿದ್ದ ಬ್ರಹ್ಮೋಸ್ ಕ್ಷಿಪಣಿ
  • ಪ್ರಸ್ತುತ 300 ಕಿ.ಮೀ ಇರುವ ಇದರ ವ್ಯಾಪ್ತಿ 800 ಕಿ.ಮೀ ಗೆ ಹೆಚ್ಚಿಸುವ ಯೋಜನೆ
  • ಅಭಿವೃದ್ಧಿ ಪೂರ್ಣಗೊಂಡರೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನ್ನು ದೆಹಲಿಯಿಂದ ಗುರಿಯಾಗಿಸಬಹುದು
ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಆರು ವಾಯುನೆಲೆಗಳನ್ನು ನಾಶಪಡಿಸಿ, ಅಂತರರಾಷ್ಟ್ರೀಯ ಗಮನ ಸೆಳೆದ ಭಾರತದ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ (Brahmos Missile) ಈಗ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ರಕ್ಷಣಾ ಮೂಲಗಳ ಪ್ರಕಾರ, ಬ್ರಹ್ಮೋಸ್‌ನ ವ್ಯಾಪ್ತಿ, ವೇಗ ಮತ್ತು ಶಕ್ತಿಯನ್ನು ಮತ್ತಷ್ಟು ಸುಧಾರಿಸಲಾಗುತ್ತಿದೆ.
ಪ್ರಸ್ತುತ, ಇದರ ವ್ಯಾಪ್ತಿಯು ಸರಿಸುಮಾರು 300 ಕಿಲೋಮೀಟರ್‌ಗಳಷ್ಟಿದೆ, ಆದರೆ ಹೊಸ ಆವೃತ್ತಿಯಲ್ಲಿ ಅದರ ವ್ಯಾಪ್ತಿಯನ್ನು 450 ರಿಂದ 800 ಕಿಲೋಮೀಟರ್‌ಗಳಿಗೆ ವಿಸ್ತರಿಸುವ ಕೆಲಸ ನಡೆಯುತ್ತಿದೆ. ಈ ಹೊಸ ಕ್ಷಿಪಣಿಗಳ ಆಗಮನದೊಂದಿಗೆ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನ್ನು ದೆಹಲಿಯಿಂದ ಗುರಿಯಾಗಿಸಬಹುದು ಎಂದು ಹೇಳಲಾಗುತ್ತಿದೆ.
ಅದರೊಟ್ಟಿಗೆ ಬ್ರಹ್ಮೋಸ್‌ನ ಹಗುರವಾದ ಆವೃತ್ತಿಯನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದ್ದು, ಸುಮಾರು 2.5 ಟನ್ ತೂಕದ ಬ್ರಹ್ಮೋಸ್‌ನ ವಿಶೇಷ ಆವೃತ್ತಿಯನ್ನು ಸುಖೋಯ್ ಎಂಕೆಐ -30 ಯುದ್ಧ ವಿಮಾನದ ಅಡಿಯಲ್ಲಿ ಅಳವಡಿಸಲು ವಿನ್ಯಾಸಗೊಳಿಸಲಾಗಿದೆ. ಯೋಜನಾ ವಿನ್ಯಾಸ ಮಂಡಳಿಯಿಂದ ಅನುಮೋದನೆ ಪಡೆದ ನಂತರ ಮುಂದಿನ ಹಂತದ ತಯಾರಿ ನಡೆಯಲಿದೆ. ಈ ಹೊಸ ಆವೃತ್ತಿಯನ್ನು ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ನಿರೀಕ್ಷೆಯಿದ್ದು, ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಬ್ರಹ್ಮೋಸ್‌ನ ಈ ಹೊಸ ಆವೃತ್ತಿಯ ಮೊದಲ ಪರೀಕ್ಷೆಯನ್ನು 2027 ರ ಅಂತ್ಯದ ವೇಳೆಗೆ ನಡೆಸಲಾಗುವುದು ಎಂಬ ಮಾಹಿತಿ ದೊರೆತಿದೆ.

ಬ್ರಹ್ಮೋಸ್​ ಬಗ್ಗೆ

ಬ್ರಹ್ಮೋಸ್​ನ್ನು ವಿಶ್ವದ ಅತ್ಯಂತ ವೇಗದ ಮತ್ತು ಮಾರಕ ಕ್ರೂಸ್ ಕ್ಷಿಪಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು, 332 ಮೀ/ಸೆ ವೇಗದಲ್ಲಿ ಗುರಿಗಳನ್ನು ಹೊಡೆಯುತ್ತದೆ. ಇದರ ಹೆಚ್ಚಿನ ವೇಗವು ಶತ್ರು ರಾಡಾರ್ ಇದನ್ನು ಪತ್ತೆಹಚ್ಚುವ ಮೊದಲೇ ತನ್ನ ಗುರಿಯನ್ನು ಇದು ನಾಶ ಪಡಿಸಿರುತ್ತದೆ.

ಮೂರು ದಿನಗಳ ಹಿಂದೆ, K-4 ಪರಮಾಣು ಕ್ಷಿಪಣಿ ಯಶಸ್ವಿ ಪರೀಕ್ಷೆ

ಇದರ ನಡುವೆ, ಡಿಸೆಂಬರ್ 23 ರಂದು ಭಾರತವು ಬಂಗಾಳಕೊಲ್ಲಿಯ ವಿಶಾಖಪಟ್ಟಣಂ ಕರಾವಳಿಯಲ್ಲಿ ಪರಮಾಣು ಸಾಮರ್ಥ್ಯದ K-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಪರಮಾಣು ಚಾಲಿತ ಜಲಾಂತರ್ಗಾಮಿ INS ಅರಿಘಾಟ್‌ನಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದು 3,500 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
ಭೂಮಿ ಮತ್ತು ಗಾಳಿಯಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾಯಿಸಿದ ನಂತರ, ಭಾರತವು ಈಗ ಸಮುದ್ರದಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾಯಿಸಲು ಸಾಧ್ಯವಾಗುತ್ತದೆ. ಈ ಕ್ಷಿಪಣಿಯು 2 ಟನ್‌ಗಳವರೆಗೆ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. K-ಸರಣಿಯ ಕ್ಷಿಪಣಿಗಳಲ್ಲಿನ "K" ಅಕ್ಷರವು ಭಾರತದ ಕ್ಷಿಪಣಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. APJ ಅಬ್ದುಲ್ ಕಲಾಂ ಅವರನ್ನು ಸೂಚಿಸುತ್ತದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net