ಎಪ್ಸ್ಟೀನ್ ಫೈಲ್ಸ್​​ನಲ್ಲಿ ಪ್ರಧಾನಿ ಮೋದಿ ಹೆಸರು ಉಲ್ಲೇಖ!...ಆರೋಪಗಳನ್ನು ಕಸದ ಬುಟ್ಟಿಗೆ ಎಸೆದ ವಿದೇಶಾಂಗ ಇಲಾಖೆ | Epstein files

Epstein files |  ಎಪ್ಸ್ಟೀನ್ ಫೈಲ್ಸ್​​ನಲ್ಲಿ  ಪ್ರಧಾನಿ ಮೋದಿ ಹೆಸರು ಉಲ್ಲೇಖ
Epstein files | ಎಪ್ಸ್ಟೀನ್ ಫೈಲ್ಸ್​​ನಲ್ಲಿ ಪ್ರಧಾನಿ ಮೋದಿ ಹೆಸರು ಉಲ್ಲೇಖ
Published on
Epstein Files: ಇತ್ತೀಚೆಗೆ ಬಿಡುಗಡೆಯಾದ "ಎಪ್ಸ್ಟೀನ್ ಫೈಲ್ಸ್" (Epstein Files) ಭಾರಿ ಸದ್ದು ಮಾಡಿದ್ದು, ಅದಕ್ಕೆ ಸಂಬಂಧಪಟ್ಟ ಕಡತಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2017ರ ಇಸ್ರೇಲ್ ಭೇಟಿಯ ಬಗ್ಗೆ ಉಲ್ಲೇಖಗಳನ್ನು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ತಿರಸ್ಕರಿಸಿದ್ದು, ಆ ಹೇಳಿಕೆಗಳು ಆಧಾರರಹಿತ ಎಂದು ತಳ್ಳಿಹಾಕಿದೆ.
ಈ ಕುರಿತಾದ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.
ಎಪ್ಸ್ಟೀನ್ ಫೈಲ್‌ಗಳಿಂದ ಬಂದಿರುವ ಇಮೇಲ್ ಸಂದೇಶದಲ್ಲಿ ಪ್ರಧಾನಿ ಮತ್ತು ಅವರ ಇಸ್ರೇಲ್ ಭೇಟಿಯ ಉಲ್ಲೇಖವಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಜುಲೈ 2017 ರಲ್ಲಿ ಪ್ರಧಾನಿಯವರ ಇಸ್ರೇಲ್ ಅಧಿಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್‌ನಲ್ಲಿರುವ ಉಳಿದ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬರ ವ್ಯರ್ಥ ಆಲೋಚನೆಗಳಷ್ಟೇ ಆಗಿದ್ದು, ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಎಪ್ಸ್ಟೀನ್ ಫೈಲ್‌

ಅಮೆರಿಕದ ನ್ಯಾಯಾಂಗ ಇಲಾಖೆಯು ದಿವಂಗತ ಹಣಕಾಸುದಾರ ಮತ್ತು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ತನಿಖಾ ಸಾಮಗ್ರಿಗಳ ದೊಡ್ಡ ಬ್ಯಾಚ್​​ನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರಲ್ಲಿ 3 ಮಿಲಿಯನ್ ಪುಟಗಳಿಗೂ ಹೆಚ್ಚು ದಾಖಲೆಗಳು, 2,000 ಕ್ಕೂ ಹೆಚ್ಚು ವಿಡಿಯೋಗಳು ಮತ್ತು ಸುಮಾರು 180,000 ಚಿತ್ರಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಇದನ್ನು ಬಿಡುಗಡೆಗೊಳಿಸಿದ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ, ಕಳೆದ ವರ್ಷ ಕಾಂಗ್ರೆಸ್ ಅಂಗೀಕರಿಸಿದ ಪಾರದರ್ಶಕತೆಯ ಆದೇಶಕ್ಕೆ ಅನುಗುಣವಾಗಿವೆ ಎಂದು ಹೇಳಿದರು.
ಇಂದಿನ ಈ ಬಿಡುಗಡೆ ಅಮೆರಿಕಾದ ಜನರಿಗೆ ಪಾರದರ್ಶಕತೆ ಮತ್ತು ಕಾಯಿದೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಬಹಳ ಸಮಗ್ರವಾದ ದಾಖಲೆ ಗುರುತಿಸುವಿಕೆ ಮತ್ತು ಪರಿಶೀಲನಾ ಪ್ರಕ್ರಿಯೆಯ ಅಂತ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.
ಫೆಡರಲ್ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ದೋಷಾರೋಪಣೆ ಸಲ್ಲಿಸಿದ ಸುಮಾರು ಒಂದು ತಿಂಗಳ ಬಳಿಕ ಆಗಸ್ಟ್ 2019 ರಲ್ಲಿ ನ್ಯೂಯಾರ್ಕ್ ಜೈಲಿನ ಕೋಣೆಯಲ್ಲಿ ಜೆಫ್ರಿ ಎಪ್ಸ್ಟೀನ್ ಆತ್ಮಹತ್ಯೆ ಮಾಡಿಕೊಂಡರು. 2008 ರಲ್ಲಿ ವಿವಾದಾತ್ಮಕ ಮನವಿ ಒಪ್ಪಂದದ ನಂತರ ಅವರು ಫ್ಲೋರಿಡಾದಲ್ಲಿ 13 ತಿಂಗಳುಗಳ ಕಾಲ ಕಸ್ಟಡಿಯಲ್ಲಿ ಸೇವೆ ಸಲ್ಲಿಸಿದ್ದರು.

ಏನಿದು ವಿವಾದ..?

ಜೆಫ್ರಿ ಎಪ್ಸ್ಟೀನ್ ಎಂಬ ಅಮೆರಿಕದ ದಸ್ತಗಿರಿಯಾದ ಲೈಂಗಿಕ ಅಪರಾಧಿಗೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು "ಎಪ್ಸ್ಟೀನ್ ಫೈಲ್ಸ್" ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಈ ದಾಖಲೆಗಳ ನಡುವೆ, 2017ರಲ್ಲಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಏನೋ ಅಹಿತಕರ ಘಟನೆ ನಡೆದಿದೆ ಮತ್ತು ಕೆಲವು ಇಮೇಲ್‌ಗಳಲ್ಲಿ ಅವರ ಹೆಸರಿದೆ ಎಂಬ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ.

ಪ್ರಧಾನಿ ಮೋದಿ ಇಸ್ರೇಲ್ ಭೇಟಿ

ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದು ಒಂದು ಐತಿಹಾಸಿಕ ಘಟನೆಯಾಗಿತ್ತು. ಸ್ವಾತಂತ್ರ್ಯಾನಂತರ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ. ಈ ಭೇಟಿಯ ಮೂಲಕ ರಕ್ಷಣೆ, ಕೃಷಿ, ಮತ್ತು ಜಲ ನಿರ್ವಹಣೆಯಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಕಾರ್ಯತಂತ್ರದ ಪಾಲುದಾರಿಕೆ ಏರ್ಪಟ್ಟಿತು. ನಾವೀನ್ಯತೆ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಸಹಕರಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದವು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net