ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುವೆ!...ಶಿವಸೇನೆ ಆಫರ್ ಬೆನ್ನಲ್ಲೇ ಶಾಕಿಂಗ್​​ ಹೇಳಿಕೆ ನೀಡಿದ ನರೋತ್ತಮ್ ಮಿಶ್ರಾ | Narottam Mishra

Narottam Mishra | ಶಿವಸೇನೆ ಆಫರ್ ಬೆನ್ನಲ್ಲೇ ಶಾಕಿಂಗ್​​ ಹೇಳಿಕೆ ನೀಡಿದ ನರೋತ್ತಮ್ ಮಿಶ್ರಾ
Narottam Mishra | ಶಿವಸೇನೆ ಆಫರ್ ಬೆನ್ನಲ್ಲೇ ಶಾಕಿಂಗ್​​ ಹೇಳಿಕೆ ನೀಡಿದ ನರೋತ್ತಮ್ ಮಿಶ್ರಾ
Published on
Narottam Mishra: ಮಧ್ಯಪ್ರದೇಶದ ಮಾಜಿ ಸಚಿವ ನರೋತ್ತಮ್ ಮಿಶ್ರಾ, ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಇತರ ಹಿರಿಯ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ನಂತರ, ತಾವು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಮತ್ತು ದತಿಯಾ ವಿಧಾನಸಭೆ ಉಪಚುನಾವಣೆಯ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಶನಿವಾರ ತಿಳಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದತಿಯಾ ಉಪಚುನಾವಣೆಗೆ ಬಿಜೆಪಿಯ ಮಿಶ್ರಾ ಬದಲಿಗೆ ಅಶುತೋಷ್ ತಿವಾರಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ ಮರುದಿನವೇ ಮಿಶ್ರಾ ಮುಖ್ಯಮಂತ್ರಿ ಮೋಹನ್ ಯಾದವ್, ಬಿಜೆಪಿ ರಾಜ್ಯ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಅಜಯ್ ಜಮ್ವಾಲ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ನಮ್ಮ ನಡುವೆ ಉತ್ತಮ ಚರ್ಚೆ ನಡೆದಿದೆ. ದತಿಯಾದಲ್ಲಿ ಬಿಜೆಪಿಯ ವಿಜಯವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ನಾವು ಮಾತನಾಡಿದ್ದೇವೆ. ನಾವು ದತಿಯಾವನ್ನು ಗೆಲ್ಲುತ್ತೇವೆ ಎನ್ನುತ್ತಾ, ಪಕ್ಷದ ಟಿಕೆಟ್ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ, ತಮ್ಮ ಬೆಂಬಲಿಗರು ಶಾಂತಿಯುತವಾಗಿರಬೇಕೆಂದು ಮನವಿ ಮಾಡಿದರು.
ತಾಳ್ಮೆ ಮತ್ತು ಶಾಂತಿ ಕಾಪಾಡಿಕೊಳ್ಳುವಂತೆ ನಾನು ಈಗಾಗಲೇ ಅವರಿಗೆ ಹೇಳಿದ್ದೇನೆ. ಕ್ರಮೇಣ ಎಲ್ಲವೂ ಸರಿಯಾಗಲಿದೆ. ನಾನು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆ ಎಂದು ಮಿಶ್ರಾ ತಿಳಿಸಿದರು.

ಶಿವಸೇನೆ (ಯುಬಿಟಿ) ಟಿಕೆಟ್ ಆಫರ್

ಈ ರಾಜಕೀಯ ಅನಿಶ್ಚಿತತೆಯ ನಡುವೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷವು ಶನಿವಾರ ಮಿಶ್ರಾ ಅವರಿಗೆ ದತಿಯಾ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಫರ್ ನೀಡಿತು. ಶಿವಸೇನೆ (ಯುಬಿಟಿ) ಮಧ್ಯಪ್ರದೇಶ ಘಟಕದ ಮುಖ್ಯಸ್ಥ ಸುನಿಲ್ ಶರ್ಮಾ ಮಾತನಾಡಿ, ಪಕ್ಷದ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ಪ್ರಸ್ತಾಪವನ್ನು ಮಾಡಲಾಗಿದೆ. ಮಿಶ್ರಾ ಈ ಆಫರ್ ಸ್ವೀಕರಿಸಿದರೆ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಹಿರಿಯ ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಪ್ರಮುಖರು ಮಧ್ಯಪ್ರದೇಶದಲ್ಲಿ ಅವರಿಗಾಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.
ಆದರೆ, ಮಿಶ್ರಾ ಅವರು ಬಂಡಾಯದ ಕುರಿತಾದ ಊಹಾಪೋಹಗಳನ್ನು ಬಹಿರಂಗವಾಗಿ ತಳ್ಳಿಹಾಕಿದ್ದು, ಪಕ್ಷದ ನಿರ್ಧಾರವೇ ಸರ್ವೋಚ್ಚ ಎಂದು ಪುನರುಚ್ಚರಿಸಿದ್ದಾರೆ ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರ ಪ್ರತಿಭಟನೆ

ಮಾಜಿ ಸಚಿವ ನರೋತ್ತಮ್ ಮಿಶ್ರಾ ರಾಜಕೀಯ ಪ್ರಭಾವ ಹೊಂದಿರುವ ದತಿಯಾದಲ್ಲಿ, ಮಿಶ್ರಾ ಬದಲಿಗೆ ಅಶುತೋಷ್ ತಿವಾರಿ ಅವರಿಗೆ ಟಿಕೆಟ್ ನೀಡುವ ಬಿಜೆಪಿಯ ನಿರ್ಧಾರವು ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಮಿಶ್ರಾ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿ 44 ನ್ನು ಸುಮಾರು 12 ಗಂಟೆಗಳ ಕಾಲ ತಡೆದರು, ಧರಣಿ ನಡೆಸಿದರು, ಮಾರುಕಟ್ಟೆ ಬಂದ್ ಮಾಡಿಸಿದರು ಮತ್ತು ಸ್ಥಳೀಯ ಬಿಜೆಪಿ ಕಚೇರಿಗೆ ಬೀಗ ಹಾಕಿದರು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದು, ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿ ಹಾನಿಗೊಳಿಸಿದ್ದರಿಂದ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ನಂತರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net