'ನಾನು ಮಗಳನ್ನು ಕಳೆದುಕೊಂಡೆ, ಮಮತಾ ಬ್ಯಾನರ್ಜಿ ಕುರ್ಚಿ ಕಳೆದುಕೊಂಡರು!': RG Kar ಸಂತ್ರಸ್ತೆಯ ತಾಯಿ ರತ್ನ ದೇಬನಾಥ್
Ratna Debnath
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
"ನಾನು ನನ್ನ ಮಗಳನ್ನು ಕಳೆದುಕೊಂಡೆ, ಮಮತಾ ಬ್ಯಾನರ್ಜಿ ತಮ್ಮ ಕುರ್ಚಿಯನ್ನು ಕಳೆದುಕೊಂಡರು"
ಪಶ್ಚಿಮ ಬಂಗಾಳದ ಪಾನಿಹಾಟಿ ವಿಧಾನಸಭಾ ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸಿದ ಬಿಜೆಪಿ ಶಾಸಕಿ
ಮಗಳಿಗೆ ನ್ಯಾಯ ಒದಗಿಸಲು ಹಾಗೂ ಮಹಿಳಾ ಸುರಕ್ಷತೆಗಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದ ರತ್ನ ದೇಬನಾಥ್
ಕೋಲ್ಕತ್ತಾ: 'ಇಂದು, ಮಮತಾ ಬ್ಯಾನರ್ಜಿಯವರು(Mamata Banerjee ) ಮತ್ತು ನಾನು ಇಬ್ಬರು ದುಃಖಿತರಾಗಿದ್ದೇವೆ. ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಅವರು ತಮ್ಮ ಸಿಎಂ ಕುರ್ಚಿಯನ್ನು ಕಳೆದುಕೊಂಡಿದ್ದಾರೆ'. ಹೀಗೆಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ಸಂತ್ರಸ್ತ ವೈದ್ಯೆಯ ತಾಯಿ ರತ್ನ ದೇಬನಾಥ್.
ರತ್ನ ದೇಬನಾಥ್ ಪಶ್ಚಿಮ ಬಂಗಾಳದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಬಿಜೆಪಿಯ ಶಾಸಕಿಯಾಗಿ ಭರ್ಜರಿ ಜಯ ಸಾಧಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತೃಣಮೂಲ ಕಾಂಗ್ರೆಸ್ ಸರ್ಕಾರ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪೋಸ್ಟ್ನಲ್ಲಿ ಹೀಗಿದೆ...
ಇಂದು ನಾನು ನಬನ್ನಾದ 14ನೇ ಮಹಡಿಯಲ್ಲಿ ಮುಖ್ಯಮಂತ್ರಿಯೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ಭಾಗಿಯಾಗಿದ್ದಾನೆ. ಅವರ ಹೆಸರು ಸುವೇಂದು ಅಧಿಕಾರಿ. ಪ್ರಾಮಾಣಿಕತೆಯ ಶಕ್ತಿ ಅಪಾರ. ಅನ್ಯಾಯದ ವಿರುದ್ಧ ತಾಳ್ಮೆಯಿಂದ ಹೋರಾಡುವುದು ಮಾತ್ರ ಅಗತ್ಯ.
ನಾನು ಮಮತಾ ಇಬ್ಬರು ದುಃಖಿತರೇ
ಮುಂದುವರೆದು, ಇಂದು ನಾನು ಮತ್ತು ಮಮತಾ ಬ್ಯಾನರ್ಜಿ ಇಬ್ಬರು ದುಃಖಿತರಾಗಿದ್ದೇವೆ. ನಾನು ನನ್ನಗಿದ್ದ ಒಬ್ಬಳೇ ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ. ಅವರು 14 ನೇ ಮಹಡಿಯಲ್ಲಿ ತಮ್ಮ ಸಿಎಂ ಕುರ್ಚಿಯನ್ನು ಕಳೆದುಕೊಂಡಿದ್ದಾರೆ
ಸಭೆ ನಂತರ ಮಾತನಾಡಿದ್ದು ಹೀಗೆ
ನಾನು ಈಗ ಶಾಸಕಿಯಾಗಿದ್ದೇನೆ. ಆದರೆ, ಜೀವನದಲ್ಲಿ ಎಲ್ಲ ಸಂತೋಷವನ್ನು ಕಳೆದುಕೊಂಡಿದ್ದೇನೆ. ನನಗಿರುವ ಏಕೈಕ ಗುರಿ ಎಂದರೆ ಅದು ನನ್ನ ಮಗಳ ಸಾವಿಗೆ ನ್ಯಾಯವನ್ನು ಪ್ರಾಮಾಣಿಕವಾಗಿ ಒದಗಿಸುವುದಾಗಿದೆ. ಬಂಗಾಳದ ಜನರು ಸತ್ಯ ಮತ್ತು ನ್ಯಾಯದ ಪರ ತಮ್ಮ ಮತ ನೀಡಿದ್ದಾರೆ.ಈ ವ್ಯವಸ್ಥೆಯ ವಿರುದ್ಧ ಹೋರಾಡಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಮತ್ತು ನನ್ನ ಮಗಳ ಪರವಾಗಿ ನ್ಯಾಯದ ಧ್ವನಿಯಾಗಲು ನಾನು ಚುನಾವಣಾ ಕಣಕ್ಕೆ ಇಳಿದೆ. ನೂತನ ಶಾಸಕಿಯಾಗಿ ನಾನು ಜನರ ಸೇವೆಗೆ ಸದಾ ಸಿದ್ಧಳಾಗಿದ್ದೇನೆ ಎಂದು ಹೇಳಿದರು.
ಏನಿದು ಘಟನೆ?
2024ರ ಆಗಸ್ಟ್ 8 ಮತ್ತು 9ರ ಮಧ್ಯರಾತ್ರಿ ಕರ್ತವ್ಯದಲ್ಲಿದ್ದ ಟ್ರೈನಿ ವೈದ್ಯೆಯ ದೇಹವು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯೊಳಗೆ ಸಿಕ್ಕಿತ್ತು. ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿತ್ತು. ಘಟನೆಯ ನಂತರದ ಘಟನೆಯಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಲಾಯಿತು. ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಯಿತು. ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು.
ಸಿಬಿಐ ತನಿಖೆ ಪ್ರಕಾರ ಇದು ಸಾಮೂಹಿಕ ಅತ್ಯಾಚಾರ ಅಲ್ಲ ಎಂದು ದೃಢಪಡಿಸಲಾಗಿದ್ದು, ಪ್ರಮುಖ ಆರೋಪಿ 'ಸಂಜಯ್ ರಾಯ್' ಗೆ ಜನವರಿ 2025 ರಲ್ಲಿ ಕೋಲ್ಕತ್ತಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ, (ಏಜೆನ್ಸೀಸ್).