ನನಗೆ ಇದರ ಬಗ್ಗೆ ಏನೂ ತಿಳಿದಿಲ್ಲ: ಐಷಾರಾಮಿ ಕಾರ್ ಕಳ್ಳಸಾಗಣೆ ಪ್ರಕರಣ; ಕಸ್ಟಮ್ಸ್ ಅಧಿಕಾರಿಗಳಿಂದ ದುಲ್ಕರ್ ಸಲ್ಮಾನ್ ವಿಚಾರಣೆ! Dulquer Salmaan

ಕಸ್ಟಮ್ಸ್ ಅಧಿಕಾರಿಗಳಿಂದ ನಟ ದುಲ್ಕರ್ ಸಲ್ಮಾನ್ ವಿಚಾರಣೆ
ಕಸ್ಟಮ್ಸ್ ಅಧಿಕಾರಿಗಳಿಂದ ನಟ ದುಲ್ಕರ್ ಸಲ್ಮಾನ್ ವಿಚಾರಣೆ
Published on

ಪ್ರಮುಖ ಮುಖ್ಯಾಂಶಗಳು

  • ಐಷಾರಾಮಿ ಕಾರುಗಳ ಅಕ್ರಮ ಆಮದು ಆರೋಪ
  • ಭೂತಾನ್​ನಿಂದ ಅಕ್ರಮವಾಗಿ ಕಾರು ಖರೀದಿ
  • ತನಿಖೆಯಲ್ಲಿ ನಟ ದುಲ್ಕರ್ ಸಲ್ಮಾನ್ ಕಸ್ಟಮ್ಸ್ ಅಧಿಕಾರಿಗಳ ಮುಂದೆ ಹಾಜರು
ಕೇರಳ: ಮಲಯಾಳಂ ಚಿತ್ರರಂಗದ ಹೆಸರಾಂತ ನಟ, ಮೆಗಾಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ (Dulquer Salmaan) ಸದ್ಯ ಹೊಸದೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂತಾನದಿಂದ ಭಾರತಕ್ಕೆ ಐಷಾರಾಮಿ ಕಾರುಗಳನ್ನು ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ಕಸ್ಟಮ್ಸ್ ಅಧಿಕಾರಿಗಳ ಮುಂದೆ ನಟ ಹಾಜರಾಗಿದ್ದು, ಅಧಿಕಾರಿಗಳು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ದೇಶಾದ್ಯಂತ ಸಂಚಲನ ಮೂಡಿಸಿರುವ ಆಪರೇಷನ್ ನಮ್‌ಖೋರ್ (Operation Numkhor) ಎಂಬ ಹೈ-ಪ್ರೊಫೈಲ್ ಕಾರ್ಯಾಚರಣೆಯ ಭಾಗವಾಗಿ ಈ ವಿಚಾರಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೋಟಿ ಕೋಟಿ ಬೆಲೆಬಾಳುವ ಐಷಾರಾಮಿ ವಾಹನಗಳನ್ನು ವಿದೇಶದಿಂದ ತಂದು, ತೆರಿಗೆ ವಂಚಿಸಲು ನಕಲಿ ದಾಖಲೆಗಳನ್ನು ಬಳಸಿ ನೋಂದಣಿ ಮಾಡಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ನಾಲ್ಕು ದುಬಾರಿ ಕಾರುಗಳು ಜಪ್ತಿ!

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೇರಳದಾದ್ಯಂತ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರ ನಿವಾಸದ ಮೇಲೂ ದಾಳಿಯಾಗಿತ್ತು. ತನಿಖೆಯ ಆರಂಭದಲ್ಲೇ ನಟನಿಗೆ ಸಂಬಂಧಿಸಿದ ನಾಲ್ಕು ಐಷಾರಾಮಿ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಇವುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್, ಟೊಯೋಟಾ ಲ್ಯಾಂಡ್ ಕ್ರೂಸರ್, ನಿಸ್ಸಾನ್ ಪೆಟ್ರೋಲ್ ಮತ್ತು ಸಿನಿಮಾವೊಂದರಲ್ಲಿ ಬಳಸಲಾದ ಮತ್ತೊಂದು ನಿಸ್ಸಾನ್ ವಾಹನ ಸೇರಿದ್ದವು.
ನಂತರ ದುಲ್ಕರ್ ಸಲ್ಮಾನ್ ಅವರು ಕೋರ್ಟ್ ಮೆಟ್ಟಿಲೇರಿ, ಭಾರಿ ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡಿದ ಬಳಿಕವಷ್ಟೇ ನ್ಯಾಯಾಲಯದ ಆದೇಶದ ಮೇರೆಗೆ ಈ ವಾಹನಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಅಗತ್ಯವಿದ್ದಾಗ ವಾಹನಗಳನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು ಮತ್ತು ಅನುಮತಿ ಇಲ್ಲದೆ ಕೇರಳದ ಹೊರಗೆ ತೆಗೆದುಕೊಂಡು ಹೋಗಬಾರದು ಎಂದು ಕೋರ್ಟ್​ ಷರತ್ತನ್ನು ವಿಧಿಸಿತ್ತು.
ಏನಿದು ಆಪರೇಷನ್ ನಮ್‌ಖೋರ್?
ಭೂತಾನ್ ಭಾಷೆಯಲ್ಲಿ ನಮ್‌ಖೋರ್ ಎಂದರೆ ‘ವಾಹನ’ ಎಂದರ್ಥ. ವಿದೇಶಿ ಮೂಲದ ದುಬಾರಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಭೂತಾನ್ ಮತ್ತು ನೇಪಾಳ ಗಡಿಗಳ ಮೂಲಕ ಭಾರತಕ್ಕೆ ಅಕ್ರಮವಾಗಿ ತಂದು, ಇಲ್ಲಿನ ಆರ್‌ಟಿಒ ಅಧಿಕಾರಿಗಳಿಗೆ ಲಂಚ ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮರುನೋಂದಣಿ ಮಾಡಿಕೊಳ್ಳುವ ದೊಡ್ಡ ಜಾಲವೇ ದೇಶದಲ್ಲಿದೆ ಎಂಬುದು ಕಸ್ಟಮ್ಸ್ ಅಧಿಕಾರಿಗಳ ಶಂಕೆ. ಭಾರತಕ್ಕೆ ತರಬೇಕಾದ ವಾಹನಗಳ ಮೇಲಿನ ಭಾರಿ ಮೊತ್ತದ ಕಸ್ಟಮ್ಸ್ ಸುಂಕ ತಪ್ಪಿಸಲು ಈ ದಾರಿಯನ್ನು ಬಳಸಲಾಗುತ್ತಿದೆ ಎನ್ನಲಾಗಿದೆ.

ನಟ ದುಲ್ಕರ್ ಸಲ್ಮಾನ್ ಹೇಳಿದ್ದೇನು?

ಸುದೀರ್ಘ ವಿಚಾರಣೆಯ ವೇಳೆ ನಟ ದುಲ್ಕರ್ ಸಲ್ಮಾನ್ ತಮಗೂ ಈ ಅಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಈ ವಾಹನಗಳನ್ನು ನೇರವಾಗಿ ವಿದೇಶದಿಂದ ತರಿಸಿಲ್ಲ, ಬದಲಿಗೆ ಭಾರತದಲ್ಲಿರುವ ಕಾರ್ ಏಜೆಂಟರ ಮೂಲಕ ಖರೀದಿಸಿದ್ದೇನೆ. ಖರೀದಿಸುವಾಗ ಏಜೆಂಟರು ನನಗೆ ಎಲ್ಲಾ ಕಾನೂನುಬದ್ಧ ದಾಖಲೆಗಳನ್ನು ನೀಡಿದ್ದರು. ಇದರಲ್ಲಿ ಯಾವುದೇ ಅಕ್ರಮ ನಡೆದಿದೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ದುಲ್ಕರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net