ದೆಹಲಿ ದುರಂತದ ಬೆನ್ನಲ್ಲೇ ಗುಜರಾತ್‌ನಲ್ಲಿ ಕಟ್ಟಡ ಕುಸಿತ: 15ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ! Gujarat Building Collapse

ಗಾಂಧಿನಗರದ ಕುಡಾಸನ್‌ನಲ್ಲಿ ಕುಸಿದುಬಿದ್ದ ನಿರ್ಮಾಣ ಹಂತದ ಕಟ್ಟಡ ಮತ್ತು ರಕ್ಷಣಾ ಕಾರ್ಯಾಚರಣೆ.
ಗಾಂಧಿನಗರದ ಕುಡಾಸನ್‌ನಲ್ಲಿ ಕುಸಿದುಬಿದ್ದ ನಿರ್ಮಾಣ ಹಂತದ ಕಟ್ಟಡ ಮತ್ತು ರಕ್ಷಣಾ ಕಾರ್ಯಾಚರಣೆ.
Published on
ಗಾಂಧಿನಗರ: ಗುಜರಾತ್‌ನ ಗಾಂಧಿನಗರದ ಕುಡಾಸನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ದಿಢೀರ್‌ ಕುಸಿದುಬಿದ್ದಿದ್ದು (Gujarat Building Collapse), ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಕನಿಷ್ಠ 15ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಆತಂಕ!

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಇದುವರೆಗೆ 8 ಜನ ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಆದರೂ, ಇನ್ನೂ ಸುಮಾರು 10 ರಿಂದ 15 ಜನರು ಅವಶೇಷಗಳ ಕೆಳಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಜೆಸಿಬಿ ಹಾಗೂ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ದೊಡ್ಡ ಪ್ರಮಾಣದ ಕಲ್ಲು-ಮಣ್ಣನ್ನು ತೆರವುಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ.
ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಹರ್ಷ ಸಂಘವಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಹತ್ತಿರದಿಂದ ವೀಕ್ಷಿಸುತ್ತಿದ್ದು, ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಪಡೆ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಸಿಲುಕಿರುವ ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲು ನಾವು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗಾಂಧಿನಗರದ ಅಗ್ನಿಶಾಮಕ ಅಧಿಕಾರಿ ರಾಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.

ದೆಹಲಿ ದುರಂತದ ಬೆನ್ನಲ್ಲೇ ಮರುಕಳಿಸಿದ ಘಟನೆ!

ಈ ಘಟನೆ ನಡೆಯಲು ಕೇವಲ ಮೂರು ದಿನಗಳ ಹಿಂದಷ್ಟೇ ದೆಹಲಿಯ ಸತ್ಯ ನಿಕೇತನದಲ್ಲೂ ಇದೇ ರೀತಿಯ ದುರಂತ ಸಂಭವಿಸಿತ್ತು. ಅಲ್ಲಿ ಪಿಜಿ (Paying Guest) ಆಗಿ ಬಳಸುತ್ತಿದ್ದ ಹಳೆಯ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದು 7 ಅಮಾಯಕ ಜೀವಗಳು ಪ್ರಾಣವನ್ನು ಕಳೆದುಕೊಂಡಿದ್ದವು.
ದೆಹಲಿ ಘಟನೆಯಲ್ಲಿ ಸುಮಾರು 40 ರಿಂದ 50 ವರ್ಷ ಹಳೆಯದಾದ ಆ ಕಟ್ಟಡಕ್ಕೆ ಯಾವುದೇ ಅನುಮತಿಯಿಲ್ಲದೆ ಮೇಲಿಂದ ಮೇಲೆ ಮಹಡಿಗಳನ್ನು ಕಟ್ಟಿರುವುದೇ ಮೂಲ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಕಟ್ಟಡದ ನೆಲಮಾಳಿಗೆಯಲ್ಲಿ ರಿಪೇರಿ ಕೆಲಸ ನಡೆಯುತ್ತಿದ್ದಾಗಲೇ ಈ ದುರಂತ ಸಂಭವಿಸಿತ್ತು.
ಸದ್ಯ ಗುಜರಾತ್‌ನಲ್ಲಿ ನಡೆದಿರುವ ಈ ಹೊಸ ಕಟ್ಟಡ ಕುಸಿತದ ಪ್ರಕರಣವು ದೇಶಾದ್ಯಂತ ಬಿಲ್ಡರ್‌ಗಳು ಮತ್ತು ಕಂಟ್ರ್ಯಾಕ್ಟರ್‌ಗಳ ನಿರ್ಲಕ್ಷ್ಯದ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಹಣಕ್ಕಾಗಿ ಜನಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಸಾರ್ವಜನಿಕರಿಂದ ಕೇಳಿಬರುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net